ನ್ಯಾಯ, ಕೆಲಸದ ಸ್ಥಳದಲ್ಲಿ ಸುರಕ್ಷತೆ ಆಗ್ರಹಿಸಿ ಮುಂದುವರಿದ ಕಿರಿಯ ವೈದ್ಯರ ಉಪವಾಸ ಮುಷ್ಕರ

Update: 2024-10-06 16:37 GMT

PC : PTI 

ಕೋಲ್ಕತಾ : ಆರ್ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ತಮ್ಮ ಸಹೋದ್ಯೋಗಿಯ ಸಾವಿನ ಕುರಿತಂತೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು, ಇದರೊಂದಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆ ಸುಧಾರಿಸುವಂತೆ ಆಗ್ರಹಿಸಿ ಕೇಂದ್ರ ಕೋಲ್ಕತ್ತಾದ ಧರ್ಮತಲಾದಲ್ಲಿ ನಡೆಸುತ್ತಿರುವ ತಮ್ಮ ಅಮರಣಾಂತ ಉಪವಾಸವನ್ನು ರವಿವಾರ ಕೂಡ ಮುಂದುವರಿಸಿದ್ದಾರೆ.

ರಾಜ್ಯ ಸರಕಾರ ಶನಿವಾರ ರಾತ್ರಿ 8.30ರ ಒಳಗೆ ವೈದ್ಯರ ಬೇಡಿಕೆ ಈಡೇರಿಸಲು ರಾಜ್ಯ ಸರಕಾರ ವಿಫಲವಾದ ಬಳಿಕ ಶನಿವಾರ ರಾತ್ರಿ ಉಪವಾಸ ಮುಷ್ಕರ ಆರಂಭವಾಗಿತ್ತು. ಶನಿವಾರ ರಾತ್ರಿಯಿಂದ ಪ್ರತಿಭಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಹಲವು ಹಿರಿಯ ವೈದ್ಯರು ಕೂಡ ತಮ್ಮ ಕಿರಿಯ ಸಹೋದ್ಯೋಗಿಗಳ ಉಪವಾಸ ಮುಷ್ಕರವನ್ನು ಬೆಂಬಲಿಸಿದ್ದಾರೆ.

‘‘ಹಿರಿಯ ವೈದ್ಯರ ಬೆಂಬಲ ನಮಗೆ ನಮ್ಮ ಸಹೋದರಿಯ ಬರ್ಬರ ಹತ್ಯೆಯ ವಿರುದ್ಧದ ಪ್ರತಿಭಟನೆಯನ್ನು ಮುಂದುವರಿಸಲು ಶಕ್ತಿ ಹಾಗೂ ಪ್ರೇರಣೆ ನೀಡಿದೆ. ಇದುವರೆಗೆ ನ್ಯಾಯ ಸಿಕ್ಕಿಲ್ಲ ಎಂಬುದನ್ನು ಅವರು ಮರೆತಿಲ್ಲ ಎಂಬುದನ್ನು ತಿಳಿದಾಗ ನಮಗೆ ಸಂತೋಷವಾಗುತ್ತಿದೆ. ವೈದ್ಯರ ವಿರುದ್ಧ ದಾಳಿಗಳು ಮುಂದುವರಿದರೂ ಸರಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ’’ ಎಂದು ಪ್ರತಿಭಟನೆ ನಡೆಸುತ್ತಿರುವ ವೈದ್ಯರಲ್ಲಿ ಒಬ್ಬರಾಗಿರುವ ದೇಬಾಸಿಶ್ ಹಾಲ್ದಾರ್ ಅವರು ಹೇಳಿದ್ದಾರೆ.

ಕೋಲ್ಕತ್ತಾ ಪೊಲೀಸ್ ಸಿಬ್ಬಂದಿಯ ಹಲ್ಲೆ ಆರೋಪದ ಬಳಿಕ ಪ್ರತಿಭಟನಕಾರರು ಆರಂಭದಲ್ಲಿ ಧರ್ಮತಲಾದ ದೋರಿನಾ ಕ್ರಾಸಿಂಗ್ನಲ್ಲಿ ಶುಕ್ರವಾರ ಧರಣಿ ಆರಂಭಿಸಿದ್ದರು. ಪ್ರತಿಭಟನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕಿರಿಯ ವೈದ್ಯರು ತಮ್ಮ ಸಹೋದ್ಯೋಗಿಗಳು ಉಪವಾಸ ಮುಷ್ಕರ ನಡೆಸುತ್ತಿರುವ ವೇದಿಕೆಗೆ ಸಿಸಿಟಿವಿ ಅಳವಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News