ಕೆಸಿಆರ್ ಬಿಜೆಪಿ ಜೊತೆ ಮೈತ್ರಿಗೆ ಪ್ರಯತ್ನಿಸಿದ್ದರು: ಪ್ರಧಾನಿ ಮೋದಿ
ಮೆಹಬೂಬಾಬಾದ್ (ತೆಲಂಗಾಣ) : ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (KCR) ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು,ಭಾರತ ರಾಷ್ಟ್ರ ಸಮಿತಿ (BRS)ಯು ಬಿಜೆಪಿಯೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳಲು ಪ್ರಯತ್ನಿಸಿತ್ತು ಎಂದು ಹೇಳಿದರು.
‘ಬಿಜೆಪಿಯ ಹೆಚ್ಚೆಚ್ಚು ಪ್ರಬಲಗೊಳ್ಳುತ್ತಿದೆ ಎನ್ನುವುದು ಕೆಸಿಆರ್ ಗೆ ಬಹಳ ಹಿಂದೆಯೇ ಅರಿವಾಗಿತ್ತು. ಬಹಳ ಸಮಯದಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು. ಒಮ್ಮೆ ದಿಲ್ಲಿಗೆ ಬಂದಿದ್ದಾಗ ನನ್ನನ್ನು ಭೇಟಿಯಾಗಿದ್ದ ಕೆಸಿಆರ್ ಮೈತ್ರಿಗಾಗಿ ನನಗೆ ಮನವಿ ಮಾಡಿಕೊಂಡಿದ್ದರು. ಆದರೆ ಬಿಜೆಪಿಯು ತೆಲಂಗಾಣ ಜನತೆಯ ಆಶಯಗಳಿಗೆ ವಿರುದ್ಧವಾಗಿ ಎಂದೂ ಕೆಲಸ ಮಾಡುವುದಿಲ್ಲ’ ಎಂದು ಇಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಹೇಳಿದ ಮೋದಿ,‘ಕೆಸಿಆರ್ ಅವರನ್ನು ಬಿಜೆಪಿಯು ತಿರಸ್ಕರಿಸಿದಾಗಿನಿಂದ ಬಿಆರ್ಎಸ್ ಗೊಂದಲಕ್ಕೀಡಾಗಿದೆ. ನನ್ನನ್ನು ನಿಂದಿಸುವ ಯಾವುದೇ ಅವಕಾಶವನ್ನು ಆ ಪಕ್ಷವು ಕಳೆದುಕೊಳ್ಳುವುದಿಲ್ಲ. ಮೋದಿ ಎಂದಿಗೂ ತನ್ನನ್ನು ಬಿಜೆಪಿಯ ಸಮೀಪಕ್ಕೂ ಬಿಟ್ಟುಕೊಳ್ಳುವುದಿಲ್ಲ ಎನ್ನುವುದು ಬಿಆರ್ ಎಸ್ ಗೆ ಗೊತ್ತಾಗಿದೆ. ಇದು ಮೋದಿಯ ಗ್ಯಾರಂಟಿಯಾಗಿದೆ ’ಎಂದರು.
ಕೆಸಿಆರ್ ಬಗ್ಗೆ ಮೋದಿ ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲ. ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದ ಬಳಿಕ ದಿಲ್ಲಿಯಲ್ಲಿ ತನ್ನನ್ನು ಭೇಟಿಯಾಗಿದ್ದ ಕೆಸಿರ್ ಎನ್ ಡಿ ಎ ಗೆ ಸೇರ್ಪಡೆಗೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಮತ್ತು ಬಿಆರ್ಸಿಯನ್ನು ಬೆಂಬಲಿಸುವಂತೆ ಕೋರಿದ್ದರು. ಆದರೆ ನಿಮ್ಮ ಕಾರ್ಯಗಳಿಂದಾಗಿ ಮೋದಿ ನಿಮ್ಮೊಂದಿಗೆ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಾನು ಅವರಿಗೆ ತಿಳಿಸಿದ್ದೆ ಎಂದು ಮೋದಿ ಕಳೆದ ತಿಂಗಳು ನಿಜಾಮಾಬಾದ್ ನಲ್ಲಿ ರ‍್ಯಾಲಿಯಲ್ಲಿ ಹೇಳಿದ್ದರು.
ಸೋಮವಾರದ ರ‍್ಯಾಲಿಯಲ್ಲಿ ಕಾಂಗ್ರೆಸ್ ಮತ್ತು ಕೆಸಿಆರ್ ತೆಲಂಗಾಣವನ್ನು ನಾಶಗೊಳಿಸುವಲ್ಲಿ ‘ಸಮಾನ ಪಾಪಿಗಳು’ ಎಂದು ಬಣ್ಣಿಸಿದ ಮೋದಿ,‘ಹೀಗಾಗಿ ತೆಲಂಗಾಣದ ಜನರು ಒಂದನ್ನು ಉಚ್ಚಾಟಿಸಿದ ಬಳಿಕ ಇನ್ನೊಂದು ರೋಗಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ,ನಾನು ರಾಜ್ಯದ ಎಲ್ಲೆಡೆ ಇದನ್ನು ನೋಡಿದ್ದೇನೆ. ತೆಲಂಗಾಣವು ಬಿಜೆಪಿಯಲ್ಲಿ ವಿಶ್ವಾಸವಿಟ್ಟಿದೆ. ತೆಲಂಗಾಣದ ಮುಂದಿನ ಮುಖ್ಯಮಂತ್ರಿ ಬಿಜೆಪಿಯಿಂದ ನೀವು ನಿರ್ಧರಿಸಿದ್ದೀರಿ. ತೆಲಂಗಾಣದ ಮೊದಲ ಬಿಜೆಪಿ ಮುಖ್ಯಮಂತ್ರಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುತ್ತಾರೆ ಎಂದು ಪಕ್ಷವು ನಿಮಗೆ ಭರವಸೆ ನೀಡಿದೆ ’ ಎಂದರು.
ನ.30ರಂದು ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿ.3ರಂದು ಮತಗಳ ಎಣಿಕೆ ನಡೆಯಲಿದೆ.