ಮೋದಿ 75 ವರ್ಷಕ್ಕೆ ಅಧಿಕಾರ ತ್ಯಜಿಸಬೇಕು ಎಂದ ಕೇಜ್ರಿವಾಲ್: ಅಂತಹ ಯಾವುದೇ ನಿಯಮವಿಲ್ಲ ಎಂದು ತಿರುಗೇಟು ನೀಡಿದ ಅಮಿತ್ ಶಾ

Update: 2024-05-11 14:16 GMT

ಅಮಿತ್ ಶಾ | PC : PTI 

ಹೊಸದಿಲ್ಲಿ: “ಮೋದಿಯು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಅವರು ಅಮಿತ್ ಶಾರನ್ನು ಪ್ರಧಾನಿಯನ್ನಾಗಿಸಲು ಮತ ಯಾಚಿಸುತ್ತಿದ್ದಾರೆ. ಅಮಿತ್ ಶಾ ಮೋದಿಯ ಗ್ಯಾರಂಟಿಯನ್ನು ಪೂರೈಸಬಲ್ಲರೆ?” ಎಂಬ ಕೇಜ್ರಿವಾಲ್ ರ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಗೆ 75 ವರ್ಷ ತುಂಬಿದ ನಂತರ ಅವರನ್ನು ಬದಿಗೆ ಸರಿಸಲಾಗುತ್ತದೆ ಎಂಬುದು ದಿಲ್ಲಿ ಮುಖ್ಯಮಂತ್ರಿಯ ಭಾರಿ ತಪ್ಪು ಗ್ರಹಿಕೆ ಎಂದು ಟೀಕಿಸಿದ್ದಾರೆ.

ಭವಿಷ್ಯದಲ್ಲಿ ಅಮಿತ್ ಶಾರನ್ನು ಪ್ರಧಾನಿಯನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ನೆಲೆ ಸೃಷ್ಟಿಸುತ್ತಿದ್ದಾರೆ ಎಂಬ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, “ಬಿಜೆಪಿಯ ಸಂವಿಧಾನದಲ್ಲಿ 75 ವರ್ಷಗಳ ಮಿತಿಯಂಥ ನಿಯಮವನ್ನು ಉಲ್ಲೇಖಿಸಲಾಗಿಲ್ಲ ಎಂದು ನಾನು ಅರವಿಂದ್ ಕೇಜ್ರಿವಾಲ್ ಮತ್ತು ಸಂಗಡಿಗರು ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ತಿಳಿಸಲು ಬಯಸುತ್ತೇನೆ. ಪ್ರಧಾನಿ ಮೋದಿ ಈ ಬಾರಿಯ ಅವಧಿಯನ್ನು ಮಾತ್ರ ಪೂರೈಸಲಿದ್ದಾರೆ ಹಾಗೂ ಭವಿಷ್ಯದಲ್ಲಿಯೂ ದೇಶ ಮುನ್ನಡೆಸುವುದನ್ನು ಮುಂದುವರಿಸಲಿದ್ದಾರೆ. ಈ ಬಗ್ಗೆ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ, ತಾವು ಜೈಲಿನಿಂದ ಬಿಡುಗಡೆಯಾದ ನಂತರ ಮೊದಲ ಪತ್ರಿಕಾ ಗೋಷ್ಠಿ ನಡೆಸಿದ್ದ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಮೋದಿ ‘ಒಂದು ರಾಷ್ಟ್ರ, ಒಬ್ಬ ನಾಯಕ’ ಯೋಜನೆಯನ್ನು ಜಾರಿಗೆ ತರಲು ಬಯಸಿದ್ದಾರೆ ಎಂದು ಹೇಳುವ ಮೂಲಕ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಚಿಂತನೆಯ ಪರ ವಕಾಲತ್ತು ವಹಿಸಿರುವ ಬಿಜೆಪಿಯನ್ನು ವ್ಯಂಗ್ಯವಾಡಿದ್ದರು.

“ಈ ಜನರು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಮುಖದ ಕುರಿತು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಪ್ರಧಾನಿ ಯಾರೆಂದು ನಾನು ಬಿಜೆಪಿಯನ್ನು ಪ್ರಶ್ನಿಸಲು ಬಯಸುತ್ತೇನೆ. ಮುಂದಿನ ವರ್ಷದ ಸೆಪ್ಟೆಂಬರ್ 17ರಂದು ಮೋದಿಗೆ 75 ವರ್ಷ ತುಂಬಲಿದೆ. 75 ವರ್ಷವಾದವರು ನಿವೃತ್ತರಾಗಬೇಕು ಎಂಬ ನಿಯಮವನ್ನು ಅವರೇ 2014ರಲ್ಲಿ ಮಾಡಿದ್ದರು. ಅವರು ಎಲ್‍.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ರನ್ನು ನಿವೃತ್ತಿಗೊಳಿಸಿದರು” ಎಂದು ಆರೋಪಿಸಿದ್ದರು.

ಮಧ್ಯಂತರ ಜಾಮೀನು ತಾತ್ಕಾಲಿಕ ಪರಿಹಾರವಾಗಿದ್ದು, ಅದು ದಿಲ್ಲಿ ಮುಖ್ಯಮಂತ್ರಿಯನ್ನು ಖುಲಾಸೆಗೊಳಿಸಿರುವುದಲ್ಲ. ಈ ಪ್ರಕರಣದಲ್ಲಿ ಈಗಾಗಲೇ ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ಸೇರಿದ್ದಾರೆ” ಎಂದು ಶಾ ಕುಟುಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News