ಮಾರುಕಟ್ಟೆಗೆ ಲಗ್ಗೆ ಇಡಲಿದೆ ಕೆ.ಜಿ. ಗೆ 29 ರೂ. ನ ಭಾರತ್ ಅಕ್ಕಿ
ಹೊಸದಿಲ್ಲಿ: ಬೆಲೆ ಏರಿಕೆ ತಡೆಯಲು ಮುಂದಿನ ವಾರದಿಂದ ಭಾರತ್ ಅಕ್ಕಿ ಉಪಕ್ರಮದ ಅಡಿಯಲ್ಲಿ ಚಿಲ್ಲರೆ ಮಾರಾಟ ಮಳಿಗೆಯ ಮೂಲಕ ಸಬ್ಸಿಡಿ ದರದಲ್ಲಿ ಧಾನ್ಯ ಮಾರಾಟ ಮಾಡಲು ಸರಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಪ್ರತಿ ಕೆ.ಜಿ.ಗೆ ಅಕ್ಕಿಯನ್ನು 29 ರೂ.ಗೆ ಮಾರಾಟ ಮಾಡುವ ಔಪಚಾರಿಕ ನಿರ್ಧಾರವನ್ನು ಮುಂದಿನ ಕೆಲವು ದಿನಗಳಲ್ಲಿ ಘೋಷಿಸಲಾಗುವುದು ಎಂದು ಅದು ತಿಳಿಸಿದೆ.
‘‘ಅಕ್ಕಿ ಬೆಲೆ ಏರಿಕೆ ಕಳವಳಕಾರಿಯಾಗಿದೆ. ಭಾರತ್ ಅಕ್ಕಿ ಉಪಕ್ರಮವು ಬೆಲೆ ಏರಿಕೆಯನ್ನು ತಡೆಯುವ ದಿಶೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಯ ಉತ್ಪಾದನೆ, ಎಫ್ಸಿಐಯಲ್ಲಿ ಸಾಕಷ್ಟು ದಾಸ್ತಾನು, ಧಾನ್ಯದ ರಫ್ತಿನ ಮೇಲೆ ಹಲವು ನಿರ್ಬಂಧ ಹಾಗೂ ಸುಂಕಗಳನ್ನು ವಿಧಿಸಿದ ಹೊರತಾಗಿಯೂ ದೇಶದಲ್ಲಿ ಅಕ್ಕಿ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರಕಾರ ಪ್ರಸಕ್ತ ಭಾರತ್ ಬೇಳೆ, ಭಾರತ್ ಹಿಟ್ಟಿನ ಉಪಕ್ರಮದಲ್ಲಿ ಕಡ್ಲೆ ಬೇಳೆ ಹಾಗೂ ಹಿಟ್ಟನ್ನು ಪ್ರತಿ ಕೆ ಜಿ ಗೆ ಅನುಕ್ರಮವಾಗಿ 60 ರೂ. ಹಾಗೂ 27.5 ರೂ.ಯ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.