ಕೊಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ : ಮಧ್ಯರಾತ್ರಿ ಪ್ರತಿಭಟನೆ ವೇಳೆ ಹಿಂಸಾಚಾರ
ಕೊಲ್ಕತ್ತಾ: ಇಲ್ಲಿನ ಆರ್.ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆಯನ್ನು ಖಂಡಿಸಿ ಗುರುವಾರ ಮಧ್ಯರಾತ್ರಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದು, ಆಸ್ಪತ್ರೆಯ ಒಂದು ಭಾಗವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಮಧ್ಯರಾತ್ರಿ ಬಳಿಕ 12.40ರ ವೇಳೆಗೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ಆಸ್ಪತ್ರೆ ಆಸ್ತಿಗಳನ್ನು ಹಾನಿಗೊಳಿಸಿದ್ದಾರೆ. ಆಗಸ್ಟ್ 9ರಂದು ನಡೆದ ಪ್ರಕರಣದ ಬೆನ್ನಲ್ಲೇ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯ ನಡುವೆ ಈ ಕೃತ್ಯ ನಡೆದಿದೆ. ವಿದ್ಯಾರ್ಥಿನಿ ಹತ್ಯೆ ಪ್ರಕರಣದ ತನಿಖೆಯನ್ನು ಬುಧವಾರ ಸಿಬಿಐ ಕೈಗೆತ್ತಿಕೊಂಡಿತ್ತು.
ಸಾಮಾಜಿಕ ಜಾಲತಾಣಗಳ ಮೂಲಕ ಅಭೂತಪೂರ್ವ ಬೆಂಬಲ ಪಡೆದ 'ರಿಕ್ಲೇಮ್ ದ ನೈಟ್' ಅಭಿಯಾನ 11.55ಕ್ಕೆ ಆರಂಭವಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ನಡುವೆಯೇ ಆರಂಭವಾದ ಈ ಪ್ರತಿಭಟನೆಗೆ ಸಣ್ಣ ಪಟ್ಟಣಗಳು ಹಾಗೂ ಕೊಲ್ಕತ್ತಾದ ಪ್ರಮುಖ ಭಾಗಗಳು ಸೇರಿದಂತೆ ದೊಡ್ಡ ನಗರಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕಲ್ಲುತೂರಾಟದಲ್ಲಿ ಹಲವು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಕೊಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಮುಂಜಾನೆ 2 ಗಂಟೆಯ ವೇಳೆಗೆ ಸ್ಥಳಕ್ಕೆ ಧಾವಿಸಿದ್ದು, ಸಾಮಾಜಿಕ ಜಾಲತಾಣ ಪೋಸ್ಟ್ಗಳು ಮತ್ತು ವದಂತಿಗಳು ಹಿಂಸೆಗೆ ಕಾರಣ ಎಂಬ ನೇರ ಆರೋಪ ಮಾಡಿದ್ದಾರೆ.
ಪ್ರತಿಭಟನಾಕಾರರ ಸೋಗಿನಲ್ಲಿ 40 ಮಂದಿಯ ಗುಂಪು ಆಸ್ಪತ್ರೆ ಆವರಣವನ್ನು ಪ್ರವೇಶಿಸಿ ಆಸ್ತಿಗೆ ಹಾನಿ ಮಾಡಿತು ಹಾಗೂ ಪೊಲೀಸರ ಮೇಲೆ ಕಲ್ಲುತೂರಾಟ ಆರಂಭಿಸಿತು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದರು ಎಂದು ಪೊಲೀಸರು ಹೇಳಿದ್ದಾರೆ.