ಕೋಲ್ಕತಾ ಅತ್ಯಾಚಾರ-ಹತ್ಯೆ ಪ್ರಕರಣ: ಸುಪ್ರೀಂ ನಿರ್ದೇಶನ ಧಿಕ್ಕರಿಸಿ ಕಿರಿಯ ವೈದ್ಯರಿಂದ ಪ್ರತಿಭಟನೆ ಮುಂದುವರಿಕೆ

Update: 2024-09-10 16:45 GMT

PC : PTI

ಕೋಲ್ಕತಾ: ಮಂಗಳವಾರ ಸಂಜೆ ಐದು ಗಂಟೆಯೊಳಗೆ ಕರ್ತವ್ಯಕ್ಕೆ ಮರಳುವಂತೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಧಿಕ್ಕರಿಸಿರುವ ಧರಣಿನಿರತ ಕಿರಿಯ ವೈದ್ಯರು,ತಮ್ಮ ಬೇಡಿಕೆಗಳು ಈಡೇರುವವರೆಗೆ ಹಾಗೂ ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ-ಹತ್ಯೆ ಪ್ರಕರಣದ ಸಂತ್ರಸ್ತೆಗೆ ನ್ಯಾಯ ದೊರಕುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಮಂಗಳವಾರ ಸಂಜೆ ಐದು ಗಂಟೆಯೊಳಗೆ ಕರ್ತವ್ಯಕ್ಕೆ ಮರಳುವಂತೆ ಸೋಮವಾರ ಪ್ರತಿಭಟನಾನಿರತ ಕಿರಿಯ ವೈದ್ಯರಿಗೆ ನಿರ್ದೇಶನ ನೀಡಿದ್ದ ಸರ್ವೋಚ್ಚ ನ್ಯಾಯಾಲಯವು,ಕೆಲಸ ಪುನರಾರಂಭಿಸಿದ ಬಳಿಕ ಅವರ ವಿರುದ್ಧ ಪ್ರತಿಕೂಲ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿತ್ತು.

ಕಿರಿಯ ವೈದ್ಯರ ವಿರುದ್ಧ ದಂಡನಾತ್ಮಕ ವರ್ಗಾವಣೆಗಳು ಸೇರಿದಂತೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಪ.ಬಂಗಾಳ ಸರಕಾರವು ಭರವಸೆ ನೀಡಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಈ ನಿರ್ದೇಶನವನ್ನು ಹೊರಡಿಸಿತ್ತು.

‘ನಮ್ಮ ಬೇಡಿಕೆಗಳು ಈಡೇರದ ಕಾರಣ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಕೋಲ್ಕತಾ ಪೋಲಿಸ್ ಆಯುಕ್ತ,ಆರೋಗ್ಯ ಕಾರ್ಯದರ್ಶಿ,ಆರೋಗ್ಯ ಸೇವೆಗಳ ನಿರ್ದೇಶಕರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರನ್ನು ಸಂಜೆ ಐದು ಗಂಟೆಯೊಳಗೆ ತೆಗೆದುಹಾಕುವಂತೆ ನಾವು ರಾಜ್ಯ ಸರಕಾರವನ್ನು ಆಗ್ರಹಿಸಿದ್ದೇವೆ. ಚರ್ಚೆಗೆ ನಾವು ಸಿದ್ಧರಿದ್ದೇವೆ’ ಎಂದು ಪ್ರತಿಭಟನಾನಿರತ ವೈದ್ಯರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News