ಕೋಪರ್ಡಿ ಅತ್ಯಾಚಾರ-ಕೊಲೆ ಪ್ರಕರಣ: ಮರಣ ದಂಡನೆಗೆ ಗುರಿಯಾಗಿದ್ದ ಯುವಕ ಪುಣೆ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ
ಪುಣೆ : ಮಹಾರಾಷ್ಟ್ರದ ಕೋಪರ್ಡಿಯಲ್ಲಿ 2016ರಲ್ಲಿ ನಡೆದಿದ್ದ ಅಪ್ರಾಪ್ತ ವಯಸ್ಕ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ಕೈದಿಯ ಶವ ರವಿವಾರ ಪುಣೆಯ ಯೆರವಾಡಾ ಜೈಲಿನಲ್ಲಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಆರಂಭಿಕ ತನಿಖೆಯು ಸೂಚಿಸಿದೆ. ಮೃತ ಕೈದಿ ಜಿತೇಂದ್ರ ಬಾಬುಲಾಲ ಶಿಂದೆ (32) ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪೊಲೀಸರು ಹೇಳಿದರು. ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಹ್ಮದ್ ನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 2017ರಲ್ಲಿ ಆರೋಪಿಗಳಾದ ಶಿಂದೆ, ಸಂತೋಷ ಭವಾಲ್ ಮತ್ತು ನಿತಿನ್ ಭೈಲುಮೆ ಅವರಿಗೆ ಮರಣ ದಂಡನೆಯನ್ನು ವಿಧಿಸಿತ್ತು.
2016 ಜು.13ರಂದು ಮರಾಠಾ ಸಮುದಾಯಕ್ಕೆ ಸೇರಿದ್ದ ಕೋಪರ್ಡಿ ಗ್ರಾಮದ 15ರ ಹರೆಯದ ಬಾಲಕಿ ಅತ್ಯಾಚಾರಗೈದ ಬಳಿಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆರೋಪಿಗಳು ಆಕೆಯನ್ನು ಮೈತುಂಬ ಗಾಯಗೊಳಿಸಿದ್ದರು ಮತ್ತು ಉಸಿರುಗಟ್ಟಿಸಿ ಕೊಲ್ಲುವ ಮುನ್ನ ಆಕೆಯ ಕೈಕಾಲುಗಳನ್ನು ಮುರಿದಿದ್ದರು ಎಂದು ಪೊಲೀಸರು ತಿಳಿಸಿದರು.
ಘಟನೆಯನ್ನು ಖಂಡಿಸಿ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ್ದ ಮರಾಠಾ ಸಮುದಾಯವು ರಾಜ್ಯಾದ್ಯಂತ ಜಾಥಾಗಳನ್ನು ನಡೆಸಿತ್ತು.