ದಕ್ಷಿಣ ಆಂಧ್ರ ಕರಾವಳಿಯನ್ನು ದಾಟಿದ ಚಂಡಮಾರುತ ಮಿಚಾಂಗ್
ಹೊಸದಿಲ್ಲಿ: ಚಂಡಮಾರುತ ಮಿಚೌಂಗ್ ಇಂದು ಅಪರಾಹ್ನ 12.30ರಿಂದ 2.30ರ ನಡುವೆ ದಕ್ಷಿಣ ಆಂಧ್ರ ಪ್ರದೇಶ ಕರಾವಳಿಯನ್ನು ಬಪಟ್ಲ ಜಿಲ್ಲೆಯ ಸಮೀಪದಿಂದ ಹಾದು ಹೋಗಿದೆ. ಚಂಡಮಾರುತದ ಪರಿಣಾಮವಾಗಿ ಗಾಳಿಯ ವೇಗ ಗಂಟೆಗೆ 90ರಿಂದ 100 ಕಿಮೀ ರಷ್ಟಿತ್ತು. ಈ ಚಂಡಮಾರುತವು ಉತ್ತರ ದಿಕ್ಕಿಗೆ ಚಲಿಸಿ ನಂತರ ದುರ್ಬಲಗೊಳ್ಳುವ ನಿರೀಕ್ಷೆಯಿದೆ.
ಸೋಮವಾರದಿಂದ ಚಂಡಮಾರುತದ ಪ್ರಭಾವದಿಂದ ಚೆನ್ನೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು ಇಲ್ಲಿಯ ತನಕ ಕನಿಷ್ಠ 12 ಜನರು ಮಳೆ ಸಂಬಂಧಿತ ಅನಾಹುತಗಳಿಗೆ ಬಲಿಯಾಗಿದ್ದಾರೆ. ಮಳೆಯಿಂದ ಚೆನ್ನೈ ನಗರದ ಹಲವು ಭಾಗಗಳು ಜಲಾವೃತಗೊಂಡಿದ್ದವು. ರನ್-ವೇಗೆ ನೀರು ನುಗ್ಗಿದ್ದರಿಂದ ವಿಮಾನಯಾನವೂ ಬಾಧಿತವಾಗಿತ್ತು.
ಆಂಧ್ರ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು ಕರಾವಳಿ ತೀರದಲ್ಲಿ ವಾಸಿಸುವ ಸುಮಾರು 900 ಜನರನ್ನು ಸ್ಥಳಾಂತರಿಸಲಾಗಿದೆ ಹಾಗೂ ಬಪಟ್ಲ ಜಿಲ್ಲೆಯಲ್ಲಿ 21 ಪರಿಹಾರ ಶಿಬಿರಗಳನ್ನೂ ಸ್ಥಾಪಿಸಲಾಗಿದೆ.
ಚಂಡಮಾರುತದ ಪ್ರಭಾವದಿಂದ ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ನೆರೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದ್ದು ಈ ಎಚ್ಚರಿಕೆ ಡಿಸೆಂಬರ್ 6 ರಂದು 11.30ರ ತನಕ ಜಾರಿಯಲ್ಲಿರುತ್ತದೆ.