ಲೋಕಸಭಾ ಚುನಾವಣೆ: ಬಿಜೆಪಿ ಟಿಕೆಟ್‌ ಘೋಷಣೆ ಬೆನ್ನಲ್ಲೇ ಸ್ಪರ್ಧಿಸಲ್ಲ ಎಂದ ಬಿಜೆಪಿ ಅಭ್ಯರ್ಥಿ

Update: 2024-03-03 09:43 GMT

ಪವನ್ ಸಿಂಗ್ (Photo: indiatoday.in)

ಹೊಸದಿಲ್ಲಿ: ಬಿಜೆಪಿಯು ಪಶ್ಚಿಮ ಬಂಗಾಳದ ಅಸನಸೋಲ್ ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ಹೆಸರಿಸಿದ್ದ ಭೋಜಪುರಿ ಗಾಯಕ ಪವನ್ ಸಿಂಗ್ ಅವರು,‌ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ ಸಾಧ್ಯವಾಗುವುದಿಲ್ಲ ಎಂದು ರವಿವಾರ ʼಎಕ್ಸ್‌ʼನಲ್ಲಿ ಪ್ರಕಟಿಸಿದ್ದಾರೆ.

‘ಬಿಜೆಪಿಯ ಉನ್ನತ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ, ಅದು ನನ್ನ ಮೇಲೆ ವಿಶ್ವಾಸವಿಟ್ಟು ಅಸನಸೋಲ್ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆದರೆ ಕಾರಣಾಂತರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಸಾಧ್ಯವಾಗುವುದಿಲ್ಲ’ ಎಂದು ಸಿಂಗ್ ಹೇಳಿದ್ದಾರೆ.

ಸಿಂಗ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯವರು ‘ಪಶ್ಚಿಮ ಬಂಗಾಳದ ಜನರ ಅದಮ್ಯ ಮನೋಭಾವ ಮತ್ತು ಶಕ್ತಿ’ ಎಂದು ಟ್ವೀಟಿಸಿದ್ದಾರೆ.

‘‘ ಬ್ರೇಕಿಂಗ್ ನ್ಯೂಸ್. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪ್ರಭಾವ! ತನ್ನ ಲಿಂಗ ಭೇದಭಾವದ ಮತ್ತು ಸ್ತ್ರೀದ್ವೇಷಿ ವೀಡಿಯೊಗಳಿಂದ ತೀವ್ರ ಟೀಕೆಗಳಿಗೆ ತುತ್ತಾಗಿರುವ ಸಿಂಗ್ ಅದೇ ಕಾರಣದಿಂದ ಚುನಾವಣೆಯಿಂದ ಹಿಂದಕ್ಕೆ ಸರಿದಿದ್ದಾರೆ. ಬಂಗಾಳದಲ್ಲಿ ಬಿಜೆಪಿಯ ‘ನಾರಿ ಶಕ್ತಿ’ ಕರೆ ಈಗ ಚಿಂದಿಚೂರಾಗಿದೆ. ಅದು ಪೊಳ್ಳು ಮತ್ತು ಅರ್ಥಹೀನ ಎನ್ನುವುದು ಬಹಿರಂಗಗೊಂಡಿದೆ ’’ ಎಂದು ಟಿಎಂಸಿಯ ನೂತನ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಟ್ವೀಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News