370ನೇ ವಿಧಿ, ಯುಸಿಸಿ ಹಾಗೂ ಮುಸ್ಲಿಂ ಮೀಸಲಾತಿಯನ್ನು ವಿರೋಧಿಸುವುದು ಧರ್ಮಾಧಾರಿತ ಪ್ರಚಾರವಾದರೆ, ಬಿಜೆಪಿ ಅದನ್ನು ಮುಂದುವರಿಸಲಿದೆ : ಅಮಿತ್ ಶಾ ಘೋಷಣೆ

Update: 2024-05-26 14:01 GMT

ಅಮಿತ್ ಶಾ | PTI 

ಹೊಸದಿಲ್ಲಿ: ನಾವು ಯಾವುದೇ ಬಗೆಯ ಧರ್ಮಾಧಾರಿತ ಪ್ರಚಾರವನ್ನು ನಡೆಸುತ್ತಿಲ್ಲ. ಆದರೆ, ನಾವು ಮುಸ್ಲಿಮರಿಗೆ ಮೀಸಲಾತಿ ನೀಡುವುದರ ವಿರುದ್ಧ ಪ್ರಚಾರ ನಡೆಸುತ್ತಿದ್ದು, 370ನೇ ವಿಧಿ ರದ್ದತಿ ಹಾಗೂ ಸಮಾನ ನಾಗರಿಕ ಸಂಹಿತೆಯ ಕುರಿತೂ ಮತದಾರರನ್ನು ಎದುರುಗೊಳ್ಳುತ್ತಿದ್ದೇವೆ. ಒಂದು ವೇಳೆ ಇದು ಧರ್ಮಾಧಾರಿತ ಪ್ರಚಾರವೆನ್ನುವುದಾದರೆ, ಬಿಜೆಪಿಯು ಇದನ್ನು ಮಾಡಿದೆ ಹಾಗೂ ಮುಂದುವರಿಸಲಿದೆ ಎಂದು ಅಮಿತ್ ಶಾ ಘೋಷಿಸಿದ್ದಾರೆ.

PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅಮಿತ್ ಶಾ, ಚುನಾವಣಾ ದತ್ತಾಂಶ ಹಾಗೂ ವಿದ್ಯುನ್ಮಾನ ಮತ ಯಂತ್ರಗಳ ನಿರ್ವಹಣೆ ಕುರಿತು ಚುನಾವಣಾ ಆಯೋಗದ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳನ್ನು ತಳ್ಳಿ ಹಾಕಿದ್ದಾರೆ. ಈ ಹಿಂದಿನ ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಅನುಸರಿಸಲಾಗಿದ್ದ ಶಿಷ್ಟಾಚಾರ ಹಾಗೂ ವಿಧಾನಗಳನ್ನೇ ಈಗಲೂ ಅನುಸರಿಸಲಾಗುತ್ತಿದೆ ಎಂದು ಅವರು ಚುನಾವಣಾ ಆಯೋಗದ ಕಾರ್ಯನಿರ್ವಹಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

“ಒಂದು ವೇಳೆ ಆ ಚುನಾವಣೆಗಳು ನ್ಯಾಯಯುತ ಎನ್ನುವುದಾದರೆ, ಈ ಚುನಾವಣೆ ಕೂಡಾ ನ್ಯಾಯಸಮ್ಮತವೆ. ನೀವು ಪರಾಭವವನ್ನು ಎದುರು ನೋಡಿದಾಗ, ನೀವು ಮುಂಚಿತವಾಗಿಯೇ ಅಳಲು ಪ್ರಾರಂಭಿಸುತ್ತೀರಿ ಹಾಗೂ ವಿದೇಶಕ್ಕೆ ಹೋಗಲು ಕಾರಣಗಳನ್ನು ಹುಡುಕಿಕೊಳ್ಳುತ್ತೀರಿ. ಇದು ಮತ್ತೆ ಮತ್ತೆ ಆಗಲು ಸಾಧ್ಯವಿಲ್ಲ. ಅವರು ಜೂನ್ 6ರಂದು ರಜೆಗೆ ತೆರಳಬೇಕಿದೆ. ಹೀಗಾಗಿ ಅವರು ಒಂದಲ್ಲ ಒಂದು ಕಾರಣಗಳನ್ನು ಹೇಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಸಕಾರಾತ್ಮಕ ಜನಮತವಿರುವುದರಿಂದ ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳಲ್ಲಿ ಬಿಜೆಪಿಯು ದೊಡ್ಡ ಮಟ್ಟದ ಗೆಲುವು ಸಾಧಿಸಲಿದೆ. ವಿರೋಧ ಪಕ್ಷಗಳು ತಮಗಾಗಲಿರುವ ನಷ್ಟವನ್ನು ಮರೆ ಮಾಚಲು ಚುನಾವಣಾ ಆಯೋಗವನ್ನು ಟೀಕಿಸುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News