ಲೋಕಸಭೆ | ನಾಯ್ಡು, ಪವಾರ್ ರನ್ನು ‘‘ಶುದ್ಧಗೊಳಿಸಿದ ವಾಶಿಂಗ್ ಮಶೀನ್’’ ಬಗ್ಗೆ ಚರ್ಚೆಗೆ ನಿಲುವಳಿ ಸೂಚನೆ!
ಹೊಸದಿಲ್ಲಿ : ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗೆ ಕ್ಲೀನ್ ಚಿಟ್ ನೀಡಿರುವುದಕ್ಕೆ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಸಂಸದ ಮಣಿಕ್ಕಮ್ ಟಾಗೋರ್ ಸೋಮವಾರ ಲೋಕಸಭೆಯಲ್ಲಿ ನಿಲುವಳಿ ಸೂಚನೆ ನೋಟಿಸ್ಗಳನ್ನು ನೀಡಿದ್ದಾರೆ.
ನಾಯ್ಡು ಮತ್ತು ಪವಾರ್ ರ ಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಬೆಂಬಲ ನೀಡುತ್ತಿವೆ. ರಾಜ್ಯ ಮಟ್ಟಗಳಲ್ಲೂ ಆ ಪಕ್ಷಗಳು ಮೈತ್ರಿ ಹೊಂದಿವೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಅನುಷ್ಠಾನ ನಿರ್ದೇಶನಾಲಯ ಮುಂತಾದ ಕೇಂದ್ರೀಯ ತನಿಖಾ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಯಬೇಕೆಂದು ಅವರು ನಿಲುವಳಿ ಸೂಚನೆ ನೋಟಿಸ್ನಲ್ಲಿ ಕರೆ ನೀಡಿದ್ದಾರೆ.
‘‘ಎರಡು ‘ವಾಶಿಂಗ್ ಮಶೀನ್’ ಕತೆಗಳ ಬಗ್ಗೆ ನಾನು ನಿಲುವಳಿ ಸೂಚನೆಗಳನ್ನು ಮಂಡಿಸಿದ್ದೇನೆ. ಅವು ನಾಯ್ಡು ಮತ್ತು ಪವಾರ್ ರನ್ನು ಪ್ರಧಾನಿ ನರೇಂದ್ರ ಮೋದಿ ಶುದ್ಧಗೊಳಿಸಿದ ಕತೆಗಳು. ಈ ಹಿನ್ನೆಲೆಯಲ್ಲಿ, ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯದ ಕಾರ್ಯವೈಖರಿಗಳ ಬಗ್ಗೆ ಚರ್ಚಿಸಲು ನಾವು ಬಯಸಿದ್ದೇವೆ’’ ಎಂದು ಟಾಗೋರ್ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಾಯ್ಡು ಮತ್ತು ಪವಾರ್ಗೆ ಕ್ಲೀನ್ ಚಿಟ್ ನೀಡುವಾಗ ‘‘ನಿಯಮಿತ ಪ್ರಕ್ರಿಯೆ’’ಯನ್ನು ಅನುಸರಿಸಲಾಗಿದೆಯೇ ಎಂದು ಟಾಗೋರ್ ಪ್ರಶ್ನಿಸಿದ್ದಾರೆ.
‘‘ಗೌರವಾನ್ವಿತ (ಲೋಕಸಭಾ) ಸ್ಪೀಕರ್ ಸರ್, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಗಂಭೀರ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿಲು ನಾನು ನಿಂತಿದ್ದೇನೆ. ಪವಾರ್ ರ 1,000 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಪ್ರಕರಣ ಮತ್ತು ನಾಯ್ಡು ಅವರ 371 ಕೋಟಿ ರೂ. ಮೊತ್ತದ ಕೌಶಲ್ಯ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಇದು ನಮ್ಮ ತನಿಖಾ ಸಂಸ್ಥೆಗಳ ನ್ಯಾಯಪರತೆಯ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿವೆ’’ ಎಂದು ಮಣಿಕ್ಕಮ್ ಟಾಗೋರ್ ತನ್ನ ನಿಲುವಳಿ ಸೂಚನೆಯಲ್ಲಿ ಹೇಳಿದ್ದಾರೆ