ಸಂಸದರು ಪ್ರಮಾಣ ವಚನ ಸ್ವೀಕರಿಸುವಾಗ ಘೋಷಣೆಗಳನ್ನು ಕೂಗುವುದನ್ನು ನಿಷೇಧಿಸಲು ನಿಯಮಗಳಿಗೆ ತಿದ್ದುಪಡಿ

Update: 2024-07-04 11:07 GMT

ಸ್ಪೀಕರ್ ಓಂ ಬಿರ್ಲಾ (Photo: PTI)

ಹೊಸದಿಲ್ಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರು ಪ್ರಮಾಣ ವಚನ ಸ್ವೀಕಾರಕ್ಕೆ ಅಥವಾ ಸದಸ್ಯತ್ವ ದೃಢೀಕರಣಕ್ಕೆ ಮುನ್ನ ಅಥವಾ ನಂತರ ಯಾವುದೇ ಹೆಚ್ಚುವರಿ ಪದಗಳು ಅಥವಾ ಹೇಳಿಕೆಗಳನ್ನು ಬಳಸುವುದನ್ನು ನಿಷೇಧಿಸಲು ಸಂಸದೀಯ ನಿಯಮಗಳನ್ನು ತಿದ್ದುಪಡಿ ಮಾಡಿದ್ದಾರೆ.

ಕಳೆದ ವಾರ ನೂತನ ಲೋಕಸಭಾ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಲವಾರು ಸಂಸದರು ‘ಜೈ ಸಂವಿಧಾನ’ ಮತ್ತು ‘ಜೈ ಫೆಲೆಸ್ತೀನ್’ನಂತಹ ಘೋಷಣೆಗಳೊಂದಿಗೆ ತಮ್ಮ ಪ್ರಮಾಣ ವಚನವನ್ನು ಅಂತ್ಯಗೊಳಿಸಿದ್ದರು. ಉತ್ತರ ಪ್ರದೇಶದ ಬರೇಲಿಯ ಬಿಜೆಪಿ ಸಂಸದ ಛತ್ರಪಾಲ ಸಿಂಗ್ ಗಂಗ್ವಾರ್ ಅವರು ‘ಜೈ ಹಿಂದುರಾಷ್ಟ್ರ’ ಎಂದು ಹೇಳುವ ಮೂಲಕ ತನ್ನ ಪ್ರಮಾಣ ವಚನ ಸ್ವೀಕಾರವನ್ನು ಮುಕ್ತಾಯಗೊಳಿಸಿದ್ದರು.

ಇದರ ನಂತರ ಬಿಲಾ ಸದಸ್ಯರ ಪ್ರಮಾಣ ವಚನ ಸ್ವೀಕಾರಕ್ಕಾಗಿ ನಿಯಮಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿದ್ದರು.

ಲೋಕಸಭೆಯಲ್ಲಿ ಕಾರ್ಯವಿಧಾನ ಮತ್ತು ಕಲಾಪಗಳ ನಿರ್ವಹಣೆ ನಿಯಮಾವಳಿಗಳ ನಿಯಮ 389ಕ್ಕೆ ತಿದ್ದುಪಡಿಯನ್ನು ಮಾಡಲಾಗಿದೆ. ಬಿರ್ಲಾ ಅವರು ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರದ ಸದನದ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನಿಯಂತ್ರಿಸಲು ‘ಸ್ಪೀಕರ್ ಗೆ ನಿರ್ದೇಶನಗಳು’ ನಿಯಮಕ್ಕೆ ಹೊಸ ನಿಬಂಧನೆಯೊಂದನ್ನು ಸೇರಿಸಿದ್ದಾರೆ.

ಹೊಸ ನಿಯಮವು ಈಗ ಪ್ರಮಾಣ ವಚನಕ್ಕೆ ಮುನ್ನ ಅಥವಾ ನಂತರ ಯಾವುದೇ ಪದಗಳನ್ನು ಅಥವಾ ಅಭಿವ್ಯಕ್ತಿಗಳನ್ನು ಬಳಸದಂತೆ ಅಥವಾ ಯಾವುದೇ ಹೇಳಿಕೆಗಳನ್ನು ನೀಡದಂತೆ ಸಂಸದರಿಗೆ ನಿರ್ದೇಶನ ನೀಡುತ್ತದೆ.

ನೂತನ ನಿಯಮಗಳಡಿ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯು ದಿಕ್ಕು ಬದಲಿಸದಂತೆ ನೋಡಿಕೊಳ್ಳಲು ಸಂಸದರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಹೇಳಿದ್ದಾರೆ.

ಹಲವು ಸದಸ್ಯರು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ರಾಜಕೀಯ ಸಂದೇಶವನ್ನು ರವಾನಿಸಲು ಬಳಕೆ ಮಾಡಿಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News