ಟಿಎಂಸಿ ನಾಯಕ ಶಾಹಜಹಾನ್ ಶೇಖ್ ಗೆ ಈಡಿ ಲುಕೌಟ್ ನೋಟಿಸ್

Update: 2024-01-07 16:19 GMT

ಹೊಸದಿಲ್ಲಿ : ಜಾರಿ ನಿರ್ದೇಶನಾಲಯ (ಈ.ಡಿ.)ದ ಅಧಿಕಾರಿಗಳಿಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ ನಾಯಕ ಶಾಹಜಹಾನ್ ಶೇಖ್ ಗೆ ಈಡಿ ಶನಿವಾರ ಲುಕೌಟ್ ನೋಟಿಸು ಜಾರಿ ಮಾಡಿದೆ.

ಪಡಿತರ ವಿತರಣೆ ಹಗರಣದ ಆರೋಪಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ ಖಾಲಿ ಗ್ರಾಮದಲ್ಲಿರುವ ಶಾಹಜಹಾನ್ ಶೇಖ್ ಅವರ ನಿವಾಸಕ್ಕೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಮೂವರು ಅಧಿಕಾರಿಗಳಿಗೆ ಶಾಹಜಹಾನ್ ಶೇಖ್ ಅವರ ಬೆಂಬಲಿಗರು ಹಲ್ಲೆ ನಡೆಸಿದ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಹಲ್ಲೆಯಿಂದ ಅಧಿಕಾರಿಗಳು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಎಫ್ ಐ ಆರ್ ದಾಖಲಿಸಿಕೊಳ್ಳಲು ಘಟನೆ ನಡೆದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು ಎಂದು ಅದು ಹೇಳಿದೆ.

ಈ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಪೊಲೀಸರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ 1 ಎಫ್ಐಆರ್ ಸೇರಿದಂತೆ ಒಟ್ಟು ಮೂರು ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ. ಶಾಹಜಹಾನ್ ಶೇಖ್ ಅವರ ನಿವಾಸದ ಉಸ್ತುವಾರಿ ವಹಿಸಿಕೊಂಡಿರುವ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಒಂದು ಎಫ್ಐಆರ್ ದಾಖಲಿಸಲಾಗಿದೆ.

ಇನ್ನೆರೆಡು ಎಫ್ಐಆರ್ಗಳಲ್ಲಿ ಒಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರಿನ ಆಧಾರದಲ್ಲಿ ಹಾಗೂ ಇನ್ನೊಂದು ಸ್ವಯಂಪ್ರೇರಿತವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147, 148, 149 ಹಾಗೂ 353ರ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಈ ನಡುವೆ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಅಧಿಕಾರಿಗಳು ಬಿಡುಗಡೆಯಾಗಿದ್ದಾರೆ. ತಲೆಗೆ ಗಾಯವಾದ ಮೂರನೇ ಅಧಿಕಾರಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿ ನಾಯಕ ಶಾಹಜಹಾನ್ ಶೇಖ್ ಅವರನ್ನು ಕೂಡಲೇ ಬಂಧಿಸುವಂತೆ ಹಾಗೂ ಭಯೋತ್ಪಾದಕರೊಂದಿಗೆ ಅವರ ಸಂಬಂಧದ ಆರೋಪದ ಕುರಿತು ತನಿಖೆ ನಡೆಸುವಂತೆ ಪಶ್ಚಿಮಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ರಾಜ್ಯ ಪೊಲೀಸ್ ವರಿಷ್ಠರಿಗೆ ನಿರ್ದೇಶಿಸಿದ್ದಾರೆ. ಶೇಖ್ ಅವರಿಗೆ ಭಯೋತ್ಪಾದಕರೊಂದಿಗೆ ನಂಟಿದೆ ಎಂಬ ಅವರ ಹೇಳಿಕೆಗೆ ಆಡಳಿತಾರೂಢ ತೃಣಮೂಲಕ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News