ಖಾಲಿ ಹಾಳೆಗೆ ಸಹಿ ಹಾಕುವಂತೆ ಮಾಡಲಾಯಿತು: ಸಂದೇಶಖಾಲಿ ಮಹಿಳೆಯ ಆರೋಪ
ಕೊಲ್ಕತ್ತಾ: ಸಂದೇಶಖಾಲಿ ವಿವಾದಕ್ಕೆ ಇನ್ನೊಂದು ಹೊಸ ತಿರುವು ದೊರಕಿದೆ. ಬಿಜೆಪಿಯ ಕೆಲವರು ತನ್ನಿಂದ ಖಾಲಿ ಹಾಳೆಗೆ ಸಹಿ ಹಾಕಿಸಿ ತನ್ನ ಹೆಸರಿನಲ್ಲಿ ಸುಳ್ಳು ಅತ್ಯಾಚಾರ ದೂರು ಬರೆದಿದ್ದಾರೆಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಬೆಳವಣಿಗೆಯು ರಾಜ್ಯದ ಆಡಳಿತ ಟಿಎಂಸಿ ಮತ್ತು ವಿಪಕ್ಷ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
“ರಾಷ್ಟ್ರೀಯ ಮಹಿಳಾ ಆಯೋಗದ ತಂಡ ಭೇಟಿ ನೀಡಿದ ದಿನದಂದು ಪಿಯಾಲಿ ಎಂಬ ಹೆಸರಿನ ಮಹಿಳೆ ದೂರುಗಳನ್ನು ನೀಡಲು ಹೇಳಿದ್ದರು. 100 ದಿನ ಉದ್ಯೋಗ ಯೋಜನೆಯಲ್ಲಿ ಹಣ ದೊರೆತಿಲ್ಲ ಎಂದು ಹೇಳಿದೆ. ನನಗೆ ಹಣ ಮಾತ್ರ ಬೇಕಿತ್ತು, ಬೇರೆ ಯಾವುದೇ ದೂರು ಇಲ್ಲ. ಯಾವುದೇ ಅತ್ಯಾಚಾರ ನಡೆದಿಲ್ಲ. ಆಕೆ (ಪಿಯಾಲಿ) ಖಾಲಿ ಹಾಳೆಗೆ ನಾವು ಸಹಿ ಹಾಕುವಂತೆ ಮಾಡಿದ್ದರು,” ಎಂದು ಆ ಮಹಿಳೆ ಹೇಳಿದರಲ್ಲದೆ ತೃಣಮೂಲ ನಾಯಕರು ಅತ್ಯಾಚಾರಗೈದ ಮಹಿಳೆಯರ ಪಟ್ಟಿಯಲ್ಲಿ ತನ್ನ ಹೆಸರೂ ಇರುವುದು ನಂತರ ತಿಳಿದು ಬಂದಿತ್ತು ಎಂದಿದ್ದಾರೆ.
ಈ ಮಹಿಳೆಯ ಸೊಸಯಂದಿರು ಕೂಡ ಪಿಯಾಲಿ ವಿರುದ್ಧ ಕಿಡಿಕಾರಿ “ಆಕೆ ಸಂದೇಶಖಾಲಿಗೆ ಕೆಟ್ಟ ಹೆಸರು ತಂದಿದ್ದಾಳೆ, ಆಕೆ ಹೊರಗಿನವಳು. ಆರಂಭದಲ್ಲಿ ಇಲ್ಲಿ ಪ್ರತಿಭಟನೆಗಳಲ್ಲಿ ಆಕೆ ಪಾಲ್ಗೊಳ್ಳುತ್ತಿದ್ದಳು. ನಂತರ ಆಕೆ ಬಿಜೆಪಿಯವಳೆಂದು ತಿಳಿದು ಬಂತು. ನಮಗೆ ಸುಳ್ಳು ಹೇಳಿ ನಮ್ಮನ್ನು ಸಿಕ್ಕಿಸಿಹಾಕಿದ್ದಕ್ಕಾಗಿ ಶಿಕ್ಷೆಯಾಗಬೇಕು,” ಎಂದಿದ್ದಾರೆ.
ಪಿಯಾಲಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ತಮಗೆ ಬೆದರಿಕೆಗಳು ಬರುತ್ತಿವೆ ಎಂದೂ ಅವರು ಹೇಳಿದ್ದಾರೆ.