ಮಧ್ಯಪ್ರದೇಶ: ಕೋಮುಗಲಭೆ ಪಿತೂರಿ ತಡೆದು, ಹಿಂದುತ್ವ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ ಐಪಿಎಸ್ ಅಧಿಕಾರಿ ವರ್ಗಾವಣೆ !
ರತ್ಲಂ (ಮಧ್ಯಪ್ರದೇಶ): ಸೆಪ್ಟೆಂಬರ್ 7ರಂದು ರತ್ಲಂ ಕೋಮುಗಲಭೆ ಪಿತೂರಿಯನ್ನು ಯಶಸ್ವಿಯಾಗಿ ತಡೆದು, 13 ಮಂದಿ ಹಿಂದುತ್ವ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಐಪಿಎಸ್ ಅಧಿಕಾರಿ ರಾಹುಲ್ ಕುಮಾರ್ ಲೋಧಾ ಅವರನ್ನು ವರ್ಗಾವಣೆ ಮಾಡಲಾಗಿದೆ.
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಗಣೇಶನ ಮೂರ್ತಿಗೆ ಕಲ್ಲು ಎಸೆಯಲಾಗಿದೆ ಎಂದು ಕೆಲ ಬಲಪಂಥೀಯ ಸಂಘಟನೆಗಳ ಮುಖಂಡರು ರತ್ಲಂನಲ್ಲಿ ವದಂತಿಯನ್ನು ಹರಡಿದ್ದು ಉದ್ವಿಗ್ನತೆಗೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ಕೆಲ ಗುಂಪುಗಳು ಪೊಲೀಸ್ ಠಾಣೆಯ ಮುಂದೆ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದು ಮಾತ್ರವಲ್ಲದೇ ಪೊಲೀಸರ ಮತ್ತು ಸ್ಥಳೀಯ ಮುಸ್ಲಿಮರ ಮೇಲೆ ಕಲ್ಲುತೂರಾಟ ನಡೆಸಿದ್ದರು.
ಹಿರಿಯ ಪೊಲೀಸ್ ಅಧೀಕ್ಷಕ ರಾಹುಲ್ ಲೋಧಾ ಈ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವುದನ್ನು ತಡೆದು, ಈ ಘಟನೆಯಲ್ಲಿ ಷಾಮೀಲಾದ, ಹಲವು ಮಂದಿ ಅಪರಾಧ ಹಿನ್ನೆಲೆಯವರೂ ಸೇರಿದಂತೆ 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೊಲೀಸರು ಕ್ಷಿಪ್ರವಾಗಿ ಮಧ್ಯಪ್ರವೇಶಿಸಿ ಕಾರ್ಯಾಚರಣೆ ನಡೆಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗುಂಪುಗಳು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಎಫ್ಐ ಆರ್ ದಾಖಲಿಸುವಂತೆ ಆಗ್ರಹಿಸಿದ್ದವು. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಹಲವು ವಾಹನಗಳನ್ನು ಹಾಗೂ ಅಂಗಡಿಗಳನ್ನು ಧ್ವಂಸಗೊಳಿಸಿದ್ದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಜಲಜ್ ಸಕ್ಲಾ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಇದಾದ ಬಳಿಕ ಮಧ್ಯರಾತ್ರಿ ನಡೆದ ಆಡಳಿತಾತ್ಮಕ ಪುನರ್ರಚನೆಯಲ್ಲಿ ರಾಹುಲ್ ಲೋಧಾ ಅವರನ್ನು ಭೋಪಾಲ್ ರೈಲ್ವೆ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ನರಸಿಂಗಪುರ ಎಸ್ಪಿ ಅಮಿತ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ಲೋಧಾ ವರ್ಗಾವಣೆ ನಾಗರಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ವರ್ಗಾವಣೆ ರಾಜಕೀಯ ಪ್ರೇರಿತ ಕ್ರಮ ಎಂದು ನೆಟ್ಟಿಗರು ವಿಶ್ಲೇಷಿಸಿದ್ದಾರೆ.