ಮಹಾರಾಷ್ಟ್ರ: ಭಾರೀ ಮಳೆಗೆ 10 ದಿನಗಳಲ್ಲಿ 11 ಮಂದಿ ಸಾವು
ನಾಗಪುರ: ಮಹಾರಾಷ್ಟ್ರದ ವಿದರ್ಭ ವಲಯದ ನಾಗಪುರ ವಿಭಾಗದಲ್ಲಿ ಜುಲೈ 13ರಿಂದ ಇದುವರೆಗೆ ನೆರೆ ಹಾಗೂ ಸಿಡಿಲಿನ ಆಘಾತಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 1,600ಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ನಾಗಪುರ, ವರ್ಧಾ, ಭಂಡಾರ, ಗೊಂಡಿಯಾ, ಚಂದ್ರಪುರ ಹಾಗೂ ಗಾಡ್ಚಿರೋಳಿ ಜಿಲ್ಲೆಗಳನ್ನು ಒಳಗೊಂಡ ನಾಗಪುರ ವಿಭಾಗದಲ್ಲಿ 875.84 ಹೆಕ್ಟೇರ್ ಕೃಷಿ ಭೂಮಿಗೆ ಮಳೆಯಿಂದ ಹಾನಿ ಉಂಟಾಗಿದೆ ಎಂದು ಇಲ್ಲಿನ ಪ್ರಾಧಿಕಾರ ನೀಡಿದ ಪ್ರಾಥಮಿಕ ವರದಿ ತಿಳಿಸಿದೆ. ಅಮರಾವತಿ, ಅಕೋಲಾ, ಭಂಡಾರ, ಬುಲ್ಡಾನ, ಚಂದ್ರಪುರ, ಗಡ್ಚಿರೋಳಿ, ಗೊಂದಿಯಾ, ನಾಗಪುರ, ವರ್ಧಾ, ವಾಶಿಮ್ ಹಾಗೂ ಯುವಾತ್ಮಲ್ ಒಳಗೊಂಡ ವಿದರ್ಭ ವಲಯದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ.
ನಾಗಪುರ ವಿಭಾಗದಲ್ಲಿ ಜುಲೈ 13ರಿಂದ ಇಂದಿನ ವರೆಗೆ ನೆರೆ ಹಾಗೂ ಸಿಡಿಲ ಆಘಾತಕ್ಕೆ ಸಂಬಂಧಿಸಿದ ಘಟನೆಗಳಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಗಡ್ಚಿರೋಳಿ ಹಾಗೂ ಭಂಡಾರದಲ್ಲಿ ತಲಾ ಮೂವರು ಸಾವನ್ನಪ್ಪಿದ್ದಾರೆ.
ವಾರ್ಧಾ ಹಾಗೂ ಗೋಂಡಿಯಾದಲ್ಲಿ ತಲಾ ಇಬ್ಬರು, ಚಂದ್ರಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ನಾಗಪುರ ವಿಭಾಗದ 6 ಜಿಲ್ಲೆಗಳಲ್ಲಿ 1,601 ಮನೆಗಳು ಹಾಗೂ ಗುಡಿಸಲುಗಳಿಗೆ ಹಾನಿ ಉಂಟಾಗಿದೆ, 39 ಪ್ರಾಣಿಗಳು ಸಾವನ್ನಪ್ಪಿವೆ ಎಂದು ವರದಿ ಹೇಳಿದೆ. ಚಂದ್ರಪುರದಲ್ಲಿ 853.74 ಹೆಕ್ಟೇರ್ ಹಾಗೂ ವರ್ಧಾದಲ್ಲಿ 22.11 ಹೆಕ್ಟೇರ್ ಸೇರಿದಂತೆ ನಾಗಪುರ ವಲಯದಲ್ಲಿ 875.84 ಹೆಕ್ಟೇರ್ ಕೃಷಿ ಭೂಮಿ ಮಳೆ ಹಾಗೂ ನೆರೆಯಿಂದ ಹಾನಿಗೀಡಾಗಿವೆ.