ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸಂಪುಟ ವಿಸ್ತರಣೆ; 39 ಸಚಿವರ ಸೇರ್ಪಡೆ
ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಒಟ್ಟು 39 ಸಚಿವರನ್ನು ಸೇರಿಸಿಕೊಳ್ಳುವ ಮೂಲಕ ರವಿವಾರ ತನ್ನ ಸಂಪುಟವನ್ನು ವಿಸ್ತರಿಸಿದ್ದಾರೆ. ಬಿಜೆಪಿಯ ಚಂದ್ರಶೇಖರ ಬಾವಂಕುಲೆ, ಪಂಕಜಾ ಮುಂಧೆ ಮತ್ತು ನಿತೀಶ್ ರಾಣೆ, ಶಿವಸೇನೆ(ಏಕನಾಥ ಶಿಂಧೆ)ಯ ಗುಲಾಬರಾವ್ ಪಾಟೀಲ ಮತ್ತು ಉದಯ ಸಾಮಂತ, ಎನ್‌ಸಿಪಿ(ಅಜಿತ್ ಪವಾರ್)ಯ ಧನಂಜಯ ಮುಂಧೆ ಮತ್ತು ಬಾಬಾಸಾಹೇಬ್ ಪಾಟೀಲ್ ನೂತನ ಸಚಿವರಲ್ಲಿ ಸೇರಿದ್ದಾರೆ.
ಸಂಪುಟದಲ್ಲಿ ಉಳಿಸಿಕೊಳ್ಳಲಾದ ಶಿಂದೆ ಶಿವಸೇನೆ ಸದಸ್ಯರಲ್ಲಿ ಉದಯ ಸಾಮಂತ, ಶಂಭುರಾಜೇ ದೇಸಾಯಿ,ಗುಲಾಬರಾವ್ ಪಾಟೀಲ್,ದಾದಾ ಭುಸೆ ಮತ್ತು ಸಂಜಯ ರಾಠೋಡ್ ಸೇರಿದ್ದಾರೆ. ಸಂಜಯ ಶಿರಸಾಟ್, ಭರತ ಗೋಗಾವಲೆ, ಪ್ರಕಾಶ ಅಬಿತ್ಕರ್,ಯೋಗೇಶ್ ಕದಂ,ಆಶಿಷ್ ಜೈಸ್ವಾಲ್ ಮತ್ತು ಪ್ರತಾಪ ಸರನಾಯಕ್ ಅವರೂ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಆದರೆ ದೀಪಕ್ ಕೇಸರಕರ್,ತಾನಾಜಿ ಸಾವಂತ್ ಮತ್ತು ಅಬ್ದುಲ್ ಸತ್ತಾರ್ ಸೇರಿದಂತೆ ಕೆಲವು ಪ್ರಮುಖ ಶಿವಸೇನೆ ನಾಯಕರಿಗೆ ಈ ಸಲ ಸಂಪುಟದಲ್ಲಿ ಸ್ಥಾನ ಲಭಿಸಿಲ್ಲ.
ಶಿವಸೇನೆ ಮತ್ತು ಎನ್‌ಸಿಪಿ ಹಿಂದಿನ ಮಹಾಯುತಿ ಸರಕಾರದಲ್ಲಿ ಹೊಂದಿದ್ದ ಖಾತೆಗಳನ್ನೇ ಉಳಿಸಿಕೊಳ್ಳುವ ನಿರೀಕ್ಷೆಯಿದ್ದು,ಶಿವಸೇನೆ ಒಂದು ಹೆಚ್ಚುವರಿ ಖಾತೆಯನ್ನು ಪಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿದವು.
ಕಂದಾಯ,ಶಿಕ್ಷಣ,ವಿದ್ಯುತ್ ಮತ್ತು ನೀರಾವರಿಯಂತಹ ಪ್ರಮುಖ ಖಾತೆಗಳನ್ನು ಬಿಜೆಪಿ ತನ್ನ ಬಳಿಯೇ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಎನ್‌ಸಿಪಿ ವಿತ್ತ, ಸಹಕಾರ,ಕೃಷಿ ಮತ್ತು ಕ್ರೀಡಾ ಖಾತೆಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.