ಮಹಾರಾಷ್ಟ್ರ | ಕೊಲ್ಹಾಪುರದ ಮಸೀದಿಯೊಂದರ ಮೇಲೆ ದಾಳಿ ನಡೆಸಿ ಕೇಸರಿ ಧ್ವಜ ಹಾರಿಸಿದ ಗುಂಪು

Update: 2024-07-15 17:07 GMT

PC: clarionindia.net

ಕೊಲ್ಹಾಪುರ : ಉದ್ರಿಕ್ತ ಗುಂಪೊಂದರ ಸದಸ್ಯರು ಮಸೀದಿಯೊಂದರ ಮೇಲೆ ದಾಳಿ ನಡೆಸಿ, ಅದರ ಮೇಲೆ ಕೇಸರಿ ಧ್ವಜ ಹಾರಿಸಿರುವ ಘಟನೆ ರವಿವಾರ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ ಎಂದು clarionindia.net ವರದಿ ಮಾಡಿದೆ.

ವಿಶಾಲ್‌ಗಢ ಕೋಟೆಯ ಬಳಿ ಅತಿಕ್ರಮಣವಾಗಿದೆ ಎಂದು ಆರೋಪಿಸಿ ಮಾಜಿ ರಾಜ್ಯಸಭಾ ಸದಸ್ಯ ಸಂಭಾಜಿರಾಜೇ ಛತ್ರಪತಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಈ ಗುಂಪು ಪಾಲ್ಗೊಂಡಿತ್ತು. ವಿಶಾಲ್‌ಗಢದಿಂದ ಕೆಲ ಕಿಲೋಮೀಟರ್ ದೂರದಲ್ಲಿರುವ ಗಜಪುರ್ ಗ್ರಾಮದಲ್ಲಿನ ಮಸೀದಿಯ ಮೇಲೆ ದಾಳಿ ನಡೆಸಿದ ಈ ಗುಂಪು, ಮುಸ್ಲಿಂ ಸಮುದಾಯದ ಮೇಲೆ ಹಲ್ಲೆಯನ್ನೂ ನಡೆಸಿತು ಎಂದು ವರದಿಯಾಗಿದೆ.

ಈ ದಾಳಿಯಲ್ಲಿ ಸುಮಾರು 40 ಮಂದಿ ಮುಸ್ಲಿಮರು ಗಾಯಗೊಂಡಿದ್ದು, ಮಕ್ಕಳನ್ನೂ ದಾಳಿಕೋರ ಗುಂಪು ಬಿಟ್ಟಿಲ್ಲ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸ್ಥಳೀಯ ಎಐಎಂಐಎಂ ನಾಯಕ ಇಮ್ರಾನ್ ಸನದಿ ಆರೋಪಿಸಿದ್ದಾರೆ.

"ಅಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದೆ. ಮನೆಗಳನ್ನು ನೆಲಸಮಗೊಳಿಸಲಾಗಿದೆ ಹಾಗೂ ಅವಕ್ಕೆ ಭಾರಿ ಹಾನಿಯನ್ನುಂಟು ಮಾಡಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಜೀವಹಾನಿಯಾಗದಿದ್ದರೂ, ಹಲವರು ಗಾಯಗೊಂಡಿದ್ದಾರೆ. ಅವರು ದೊಣ್ಣೆ ಹಾಗೂ ಖಡ್ಗಗಳನ್ನು ಹಿಡಿದು ದಾಳಿ ನಡೆಸಿದ್ದಾರೆ. ಕೆಲವು ಪೊಲೀಸರೂ ಖಡ್ಗಗಳಿಂದ ದಾಳಿ ನಡೆಸಿದ್ದಾರೆ" ಎಂದು ಅವರು ದೂರಿದ್ದಾರೆ.

"ಮಸೀದಿಯೊಂದನ್ನು ಧ್ವಂಸಗೊಳಿಸಲಾಗಿದೆ ಹಾಗೂ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಒಂದು ಬಗೆಯ ಅನಿಲ ಬಳಸಿ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ" ಎಂದು ಇಮ್ರಾನ್ ಸನದಿ ಆಪಾದಿಸಿದ್ದಾರೆ.

ಅವರ ಪ್ರಕಾರ, ಈ ಘಟನೆಯಲ್ಲಿ ಗಾಯಗೊಂಡಿರುವವರೆಲ್ಲ ಮುಸ್ಲಿಮರೇ ಆಗಿದ್ದಾರೆ. "ಅವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರನ್ನು ಅಮಾನುಷವಾಗಿ ಥಳಿಸಲಾಗಿದೆ. ಆರು ವರ್ಷದ ಮಗುವಿನ ಮೇಲೂ ಹಲ್ಲೆ ನಡೆಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಈ ಘಟನೆಯ ಕೆಲವು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕೆಲವು ಜನರು ಮಸೀದಿಯ ಗೋಡೆಗಳನ್ನೇರಿ, ಮಸೀದಿಯ ಮೇಲೆ ಕೇಸರಿ ಧ್ವಜವನ್ನು ನೆಡುತ್ತಿರುವುದು ಹಾಗೂ ಕೊಡಲಿಯಿಂದ ಮಿನಾರುಗಳನ್ನು ಹೊಡೆದು ಹಾಕುತ್ತಿರುವುದು ಕಂಡು ಬಂದಿದೆ. ಮತ್ತೊಂದು ವಿಡಿಯೊದಲ್ಲಿ ಗುಂಪೊಂದು 'ಜೈ ಶ್ರೀರಾಮ್' ಘೋಷಣೆ ಕೂಗುತ್ತಾ ಮಸೀದಿಯೊಳಗಿನ ಎಲ್ಲವನ್ನೂ ಧ್ವಂಸಗೊಳಿಸುತ್ತಿರುವುದು ಸೆರೆಯಾಗಿದೆ.

ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲು ಎಐಎಂಐಎಂ ನಿಯೋಗವೊಂದು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲು ಮುಂದಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕೊಲ್ಹಾಪುರ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್, "ಯಾವುದೇ ಅಹಿತಕರ ಘಟನೆಯಾಗದಂತೆ ತಡೆಯಲು ಸೂಕ್ತ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಕೆಲವು ದುಷ್ಕೃತ್ಯಗಳು ನಡೆದಿವೆ ಎಂಬ ಸಂಗತಿ ನಮ್ಮ ಗಮನಕ್ಕೆ ಬಂದಿದೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ, ಅದರಂತೆ ನಾವು ಪ್ರಕರಣಗಳನ್ನು ದಾಖಲಿಸಲಿದ್ದೇವೆ" ಎಂದು ತಿಳಿಸಿದ್ದಾರೆ ಎಂದು The Times Of India ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News