ಮಹಾರಾಷ್ಟ್ರ| ಮತದಾರರ ಪಟ್ಟಿಯಲ್ಲಿ ಮುಸ್ಲಿಮರ ಸೇರ್ಪಡೆ ನಿಷೇಧಿಸಿ ನಿರ್ಣಯ ಅಂಗೀಕರಿಸಿದ ಪಂಚಾಯತ್
ಮುಂಬೈ: ನವಂಬರ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮಹಾರಾಷ್ಟ್ರವು ಸಜ್ಜಾಗುತ್ತಿರುವಾಗ ಕೊಲ್ಲಾಪುರ ಜಿಲ್ಲೆಯ ಶಿಂಗಣಾಪುರ ಪಂಚಾಯತಿಯು ಮತದಾರರ ಪಟ್ಟಿಯಲ್ಲಿ ಮುಸ್ಲಿಮರ ಸೇರ್ಪಡೆಯನ್ನು ನಿಷೇಧಿಸಿ ಅಸಾಂವಿಧಾನಿಕ ನಿರ್ಣಯವನ್ನು ಅಂಗೀಕರಿಸಿದೆ ಎಂದು ವರದಿಯಾಗಿದೆ.
ಆ.28ರಂದು ಅಂಗೀಕರಿಸಲಾದ ನಿರ್ಣಯವನ್ನು ಸೆ.5ರಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಸರಪಂಚ್ ರಸಿಕಾ ಪಾಟೀಲ್ ಅವರು ಸಹಿ ಹಾಕಿರುವ ನಿರ್ಣಯದಲ್ಲಿ ಗ್ರಾಮಸಭೆಯಲ್ಲಿ ‘ವಿಸ್ತೃತ ಚರ್ಚೆ’ಯ ಬಳಿಕ ಗ್ರಾಮದಲ್ಲಿಯ ಮುಸ್ಲಿಮರನ್ನು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಿಸದಿರಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಗ್ರಾಮಸಭೆಯು ಕಾನೂನಾತ್ಮಕ ಸಂಸ್ಥೆಯಾಗಿದ್ದು,ಅದು ಗ್ರಾಮದ ಸೀಮೆಯೊಳಗೆ ಮಹತ್ವದ ವಿಷಯಗಳನ್ನು ಶಿಫಾರಸು ಮಾಡಬಹುದು ಅಥವಾ ಪರಿಗಣಿಸಬಹುದು. ಆದರೆ ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆ ಅಥವಾ ಅಳಿಸುವಿಕೆ ಗ್ರಾಮಸಭೆ ಅಥವಾ ಪಂಚಾಯತ್ ನ ಅಧಿಕಾರ ವ್ಯಾಪ್ತಿಯಲ್ಲಿಲ್ಲ. ಅದು ಸಂಪೂರ್ಣವಾಗಿ ಚುನಾವಣಾ ಅಯೋಗದ ಹೊಣೆಗಾರಿಕೆಯಾಗಿದೆ.
ನೆರೆಯ ನಾಗದೇವವಾಡಿ ಗ್ರಾಮದಲ್ಲಿ ಇಬ್ಬರು ಬಾಂಗ್ಲಾದೇಶಿ ಮಹಿಳೆಯರು ನುಸುಳಿದ ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸಭೆಯಲ್ಲಿ ಚರ್ಚೆಗಳು ನಡೆದಿದ್ದವು ಎಂದು ಪಾಟೀಲ್ ಸುದ್ದಿಸಂಸ್ಥೆಗೆ ತಿಳಿಸಿದರು. ನಿರ್ಣಯವು ಮುಸ್ಲಿಮರ ವಿರುದ್ಧವಾಗಿರಲಿಲ್ಲ, ಕೇವಲ ನುಸುಳುಕೋರರ ವಿರುದ್ಧವಾಗಿತ್ತು ಎಂದು ಅವರು ಸಮಜಾಯಿಷಿ ನೀಡಿದರು. ‘ನಾವು ತಪ್ಪು ಮಾಡಿದ್ದೆವು, ಮತದಾರರ ಪಟ್ಟಿಯಲ್ಲಿ ಬದಲಾವಣೆಗಳನ್ನು ಚುನಾವಣಾ ಆಯೋಗವು ಮಾತ್ರ ಮಾಡಬಹುದು ಎನ್ನುವುದು ನಮಗೆ ಗೊತ್ತಿರಲಿಲ್ಲ’ ಎಂದರು.
ನಾಗದೇವವಾಡಿ ಗ್ರಾಮವನ್ನು ಪ್ರವೇಶಿಸಿ ನಕಲಿ ಭಾರತೀಯ ದಾಖಲೆಗಳೊಂದಿಗೆ ವಾಸವಾಗಿದ್ದ ಆರೋಪದಲ್ಲಿ ಇಬ್ಬರು ಬಾಂಗ್ಲಾದೇಶಿ ಮಹಿಳೆಯರನ್ನು ಕೊಲ್ಲಾಪುರ ಪೋಲಿಸರು ಕಳೆದ ಮೇ ತಿಂಗಳಿನಲ್ಲಿ ಬಂಧಿಸಿದ್ದರು.
ಕೊಲ್ಲಾಪುರ ನಗರದಿಂದ ಒಂಭತ್ತು ಕಿ.ಮೀ.ಅಂತರದಲ್ಲಿರುವ ಶಿಂಗಣಾಪುರ ಗ್ರಾಮವು ಸುಮಾರು 22,000 ಜನಸಂಖ್ಯೆಯನ್ನು ಹೊಂದಿದೆ. ಮರಾಠಾಗಳು ಬಹುಸಂಖ್ಯಾತರಾಗಿದ್ದು, ಇತರರಲ್ಲಿ ಬೌದ್ಧರು ಮತ್ತು ಕೆಲವು ಒಬಿಸಿ ಜಾತಿಗಳು ಸೇರಿದ್ದಾರೆ. ಮುಸ್ಲಿಮರ ಜನಸಂಖ್ಯೆ ಸುಮಾರು 1,200ರಷ್ಟಿದೆ.
ಶಿಂಗಣಾಪುರ ಗ್ರಾಮವು ಈವರೆಗೆ ಕೋಮು ಉದ್ವಿಗ್ನತೆಗೆ ಸಾಕ್ಷಿಯಾಗಿಲ್ಲದಿದ್ದರೂ,ಜಿಲ್ಲೆಯಲ್ಲಿ ಇತ್ತೀಚಿಗೆ ಹಲವಾರು ಕೋಮು ವೈಷಮ್ಯದ ಘಟನೆಗಳು ನಡೆದಿವೆ.
ಎರಡು ವಾರಗಳ ಹಿಂದೆಯೇ ನಿರ್ಣಯ ಅಂಗೀಕಾರವಾಗಿದ್ದು,ಆಗ ಅದನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ಆದರೆ ಅದು ಬಹಿರಂಗಗೊಂಡ ಬಳಿಕ ಪಂಚಾಯತ್ ನಿರ್ಣಯವನ್ನು ಹಿಂದೆಗೆದುಕೊಳ್ಳುವಂತೆ ಒತ್ತಡವನ್ನು ಎದುರಿಸಿತ್ತು.
ಪಂಚಾಯತ್ ರವಿವಾರ ಲಿಖಿತ ಕ್ಷಮೆಯಾಚನೆಯನ್ನು ಹೊರಡಿಸಿದ್ದು, ‘ಈ ನಿರ್ಣಯಕ್ಕಾಗಿ ನಾವು ಮುಸ್ಲಿಮ್ ಸಮುದಾಯದ ಕ್ಷಮೆಯನ್ನು ಯಾಚಿಸುತ್ತೇವೆ. ಸಮುದಾಯವನ್ನು ಗುರಿಯಾಗಿಸಿಕೊಂಡು ಇಂತಹ ನಿರ್ಣಯವನ್ನು ಯಾವತ್ತೂ ತೆಗೆದುಕೊಳ್ಳುವುದಿಲ್ಲ ಎನ್ನುವುದನ್ನು ನಾವು ಖಚಿತಪಡಿಸುತ್ತೇವೆ ’ಎಂದು ಅದರಲ್ಲಿ ಹೇಳಲಾಗಿದೆ.