ಮಹಾರಾಷ್ಟ್ರ: ಕಾಂಗ್ರೆಸ್ ನ ಹಿರಿಯ ನಾಯಕ ಪದ್ಮಾಕರ್ ವಾಲ್ವಿ ಬಿಜೆಪಿ ಸೇರ್ಪಡೆ

Update: 2024-03-13 14:18 GMT

ಪದ್ಮಾಕರ್ ವಾಲ್ವಿ | Photo: ANI 

ಮುಂಬೈ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಪದ್ಮಾಕರ್ ವಾಲ್ವಿ ಅವರು ಬುಧವಾರ ಬಿಜೆಪಿ ಸೇರಿದ್ದಾರೆ.

ವಾಲ್ವಿ ಅವರು ಮಾರ್ಚ್ 12ರಂದು ಬವಾಂಕುಲೆ ಅವರನ್ನು ಭೇಟಿಯಾಗಿದ್ದರು. ಇದು ಅವರು ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ಕುರಿತ ವದಂತಿಗೆ ಕಾರಣವಾಗಿತ್ತು. ಅದೇ ದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಭಾಗವಾಗಿ ಬುಡಕಟ್ಟು ಪ್ರಾಬಲ್ಯದ ನಂದುರ್ಬಾರ್ ಜಿಲ್ಲೆಯಲ್ಲಿ ಇದ್ದರು.

‘‘ಕಾಂಗ್ರೆಸ್ ನ ನಿಜವಾದ ಕಾರ್ಯಕರ್ತರಾದ ನಾವು ವರ್ಷಗಳಿಂದ ಅಸಮಾಧಾನಗೊಂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಪ್ರಚಾರ ಮಾಡುವ ಅವಕಾಶ ಸಿಗಬಹುದು ಎಂಬ ಭರವಸೆ ನನಗಿತ್ತು. ಕಾಂಗ್ರೆಸ್ ಪಕ್ಷದ ನಿರ್ವಹಣೆಯಲ್ಲಿ ಸಮಗ್ರತೆ ಇಲ್ಲ’’ ಎಂದು ವಾಲ್ವಿ ಅವರು ಬುಧವಾರ ಬಿಜೆಪಿ ಸೇರಿದ ಬಳಿಕ ಹೇಳಿದ್ದಾರೆ.

ವಾಲ್ವಿ ಅವರು ನಂದುರ್ಬಾರ್ ನ ಶಹಾದಾ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕರಾಗಿದ್ದರು. ರಾಜ್ಯದ ಮಾಜಿ ಕ್ರೀಡಾ ಸಚಿವರಾಗಿದ್ದ ವಾಲ್ವಿ ನಂದುರ್ಬಾರ್ ಹಾಗೂ ಉತ್ತರ ಮಹಾರಾಷ್ಟ್ರದ ಕಾಂಗ್ರೆಸ್  ನ ಪ್ರಮಖ ನಾಯಕರಲ್ಲಿ ಒಬ್ಬರಾಗಿದ್ದರು.

2009ರಲ್ಲಿ ವಾಲ್ವಿ ಅವರು ಶಹಾದಾ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಆದರೆ, 2024ರ ವಿಧಾನ ಸಭೆ ಚುನಾವಣೆಯಲ್ಲಿ ಅವರು ಸೋತಿದ್ದರು. ವಾಲ್ವಿ ಅವರು ಬಿಜೆಪಿ ಸೇರುತ್ತಿದ್ದಾರೆ ಎಂಬ ವದಂತಿ ಕಳೆದ ಎರಡು ತಿಂಗಳಿಂದ ಕೇಳಿ ಬಂದಿತ್ತು. ಆದರೆ, ಈ ವದಂತಿಯನ್ನು ವಾಲ್ವಿ ಅವರು ನಿರಾಕರಿಸಿದ್ದರು.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News