ಮಹುವಾ ಮೊಯಿತ್ರಾ ಹಾಗೂ ರಮೇಶ್ ಬಿಧೂರಿ ಪ್ರಕರಣಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ: ಸಚಿವ ಪ್ರಹ್ಲಾದ್ ಜೋಶಿ
ಹೊಸದಿಲ್ಲಿ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಹಾಗೂ ರಮೇಶ್ ಬಿಧೂರಿ ಪ್ರಕರಣಗಳ ನಡುವೆ ಯಾವುದೇ ಹೋಲಿಕೆ ಇಲ್ಲ ಎಂದಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸ್ವತಃ ಟಿಎಂಸಿ ನಾಯಕಿಯೇ ತಾನು ತನ್ನ ಸಂಸದೀಯ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ಅನ್ನು ಉದ್ಯಮಿ ದರ್ಶನ್ ಹಿರಾನಂದನಿ ಅವರೊಂದಿಗೆ ಹಂಚಿಕೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
indiatoday.in ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, “ತಾನು ಉದ್ಯಮಿ ಹಿರಾನಂದನಿ ಅವರಿಂದ ಉಡುಗೊರೆಗಳು ಹಾಗೂ ಕಾನೂನುಬಾಹಿರ ಕೊಡುಗೆಗಳನ್ನು ಸ್ವೀಕರಿಸಿರುವುದಾಗಿ ಸ್ವತಃ ಆಕೆಯೇ ಒಪ್ಪಿಕೊಂಡಿದ್ದಾಳೆ” ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ನಡುವೆ, ಬಿಎಸ್ಪಿ ಸಂಸದ ದಾನಿಶ್ ಅಲಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರಿಗೆ ಹಕ್ಕು ಬಾಧ್ಯತಾ ಸಮಿತಿಯು ನೋಟಿಸ್ ಜಾರಿ ಮಾಡಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
“ಈ ವಿಷಯದ ಕುರಿತು ಹಕ್ಕು ಬಾಧ್ಯತಾ ಸಮಿತಿಯು ಶೀಘ್ರದಲ್ಲೇ ತನ್ನ ವರದಿಯನ್ನು ಸಲ್ಲಿಸಲಿದೆ” ಎಂದು India Today ಸುದ್ದಿ ಸಂಸ್ಥೆಯ ಸಲಹಾ ಸಂಪಾದಕ ರಾಜ್ ದೀಪ್ ಸರ್ದೇಸಾಯಿ ಅವರಿಗೆ ನೀಡಿರುವ ಸಂದರ್ಶನದಲ್ಲಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.