ಮುಂಬೈ: ನೆರೆಹೊರೆಯವರನ್ನು ಸಿಲುಕಿಸಲು ನಿಷೇಧಿತ ಪಿಎಫ್‌ಐ ಪರ ಪೋಸ್ಟರ್ ಹಾಕಿದ್ದ ವ್ಯಕ್ತಿಯ ಬಂಧನ
ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದನ್ನು ಮನಗಂಡ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬೈ: ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪರವಾಗಿ ಪೋಸ್ಟರ್ ಗಳನ್ನು ಅಂಟಿಸಿದ್ದ 68 ವಯಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈತ ಕೆಲ ಮನೆಗಳ ಮೇಲೆ ಈ ಪೋಸ್ಟರ್ ಅನ್ನು ಅಂಟಿಸಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಪ್ರಯತ್ನಿಸಿದ್ದ ಎಂದು ತಿಳಿದು ಬಂದಿದೆ. ಆತನಿಗೆ ಅವರ ಮೇಲೆ ದ್ವೇಷವಿತ್ತು ಎಂದು ವರದಿ ಉಲ್ಲೇಖಿಸಿದೆ.
ನ್ಯೂ ಪನ್ವೆಲ್‌ನಲ್ಲಿರುವ ನೀಲ್ ಅಂಗನ್ ಸೊಸೈಟಿಯ ಹೊರಗೆ ಅಂಟಿಸಲಾದ ಸ್ಟಿಕ್ಕರ್‌ಗಳಲ್ಲಿ 'ಪಿಎಫ್‌ಐ ಝಿಂದಾಬಾದ್' ಮತ್ತು '786' ಎಂದು ಬರೆಯಲಾಗಿದೆ ಎಂದು ವರದಿ ತಿಳಿಸಿದೆ. ಕಲೆವು ಮನೆಯ ಹೊರಗಡೆ ಪಟಾಕಿಯನ್ನೂ ಕಟ್ಟಲಾಗಿತ್ತು.
ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದನ್ನು ಮನಗಂಡ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಜೂನ್ 24 ರಂದು ಭಾರತೀಯ ದಂಡನೆಯ ಸೆಕ್ಷನ್ 153 (ಎ) (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕದಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಎಸಗುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವಾಗ, ಪೊಲೀಸ್ ಅಧಿಕಾರಿಗಳು ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಸೊಸೈಟಿಯ ಕಾರ್ಯದರ್ಶಿ ಏಕನಾಥ್ ಕೇವಾಲೆ ಎಂಬಾತ ಪದೇ ಪದೇ ಕಟ್ಟಡದ ಟೆರೇಸ್ ಗೆ ಹೋಗುತ್ತಿರುವುದನ್ನು ಅವರು ನೋಡಿದರು. ಆದರೆ ನಡೆಯುತ್ತಿರುವ ತನಿಖೆಯ ಬಗ್ಗೆ ವಿಚಾರಿಸಲು ಕೇವಾಲೆ ನಿಯಮಿತವಾಗಿ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.
ಆದಾಗ್ಯೂ, ತನಿಖಾ ತಂಡವು ಅವನ ಮುಂದೆ ಸಾಕ್ಷ್ಯವನ್ನು ಇರಿಸಿ ವಿಚಾರಣೆಗೆ ಒಳಪಡಿಸಿದ ನಂತರ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು indianexpress.com ವರದಿ ಮಾಡಿದೆ.