ಬೀಫ್ ಸಾಗಣೆ ಶಂಕಿಸಿ ವೃದ್ದನ ಮೇಲೆ ಹಲ್ಲೆ | ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮೂವರ ಮೇಲೆ ಮತ್ತೆ ಜಾಮೀನು ರಹಿತ ಪ್ರಕರಣ ದಾಖಲು

Update: 2024-09-02 18:34 GMT

Photo : x

ಮುಂಬೈ : 72ರ ಹರೆಯದ ವೈದ್ದರೊಬ್ಬರ ಮೇಲೆ ‘ಗೋಮಾಂಸ’ ಸಾಗಿಸುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಬಂಧಿತನಾಗಿರುವ ಮೂವರ ವಿರುದ್ಧ ದುರ್ಬಲ ಸೆಕ್ಷನ್ ಗಳಡಿ ಕೇಸು ದಾಖಲಿಸಿಕೊಂಡಿದ್ದಕ್ಕೆ ಟೀಕೆ ಎದುರಿಸಿದ ನಂತರ, ಥಾಣೆಯ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಸೋಮವಾರ “ಡಕಾಯಿತಿ” ಮತ್ತು “ಧಾರ್ಮಿಕ ಭಾವನೆಗಳಿಗೆ ನೋಯಿಸುವ ಆರೋಪಗಳನ್ನು ಸೇರಿಸಿದ್ದಾರೆ ಪ್ರಕರಣ ದಾಖಲಿಸಿದ್ದಾರೆ.

ಈ ಹೆಚ್ಚುವರಿ ಆರೋಪಗಳು ಜಾಮೀನು ರಹಿತವಾಗಿರುವುದರಿಂದ ನ್ಯಾಯಾಲಯದ ಅನುಮತಿಯೊಂದಿಗೆ ಜಿಆರ್‌ಪಿ ಅಧಿಕಾರಿಗಳು ರವಿವಾರ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳನ್ನು ಮತ್ತೆ ಬಂಧಿಸಲಿದ್ದಾರೆ.

ಪೊಲೀಸರ ಪ್ರಕಾರ, ಧುಲೆ ಮೂಲದ ಆಕಾಶ್ ಅವದ್, ನಿತೇಶ್ ಅಹಿರೆ ಮತ್ತು ಜಯೇಶ್ ಮೋಹಿತೆ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸಲು ಮುಂಬೈಗೆ ಹೋಗುತ್ತಿದ್ದಾಗ, ರೈಲಿನಲ್ಲಿ ವಯೋವೃದ್ಧರೊಬ್ಬರು ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಅವಮಾನಿಸಿ ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗಿತ್ತು.

ಬಳಿಕ ಅವರನ್ನು ಆಗಸ್ಟ್ 31 ರಂದು ಬಂಧಿಸಲಾಯಿತು. ಜಾಮೀನು ರಹಿತ ಆರೋಪಗಳನ್ನು ಮಾಡದೇ ದುರ್ಬಲ ಪ್ರಕರಣಗಳಡಿ ಪ್ರಕರಣ ದಾಖಲಿಸಿದ್ದರಿಂದ ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು.

“ನಾವು ದೂರುದಾರರ ಹೆಚ್ಚುವರಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಅವರು ತಮ್ಮ ಬಳಿ 2,800 ರೂಪಾಯಿ ನಗದು ಹೊಂದಿದ್ದು, ದಾಳಿ ಮಾಡಿದವರು ಅದನ್ನು ದೋಚಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ದೂರುದಾರರು ಈ ವಿಚಾರ ಪ್ರಸ್ತಾಪಿಸಿರಲಿಲ್ಲ. ಈಗ ನಾವು ಪ್ರಕರಣಕ್ಕೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 311 ಮತ್ತು 302 ಸೇರಿಸಿ ಪ್ರಕರಣ ದಾಖಲಿಸಿದ್ದೇವೆ”ಎಂದು ಥಾಣೆ ಹಿರಿಯ ಜಿಆರ್‌ಪಿಯ ಇನ್ಸ್‌ಪೆಕ್ಟರ್ ಅರ್ಚನಾ ದುಸಾನೆ ಹೇಳಿದ್ದಾರೆ.

“ಸೆಕ್ಷನ್ 311 ಜಾಮೀನು ರಹಿತವಾಗಿರುವುದರಿಂದ, ಕೇವಲ ಒಂದೇ ದಿನದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮೂವರ ವಿರುದ್ಧ ಜಾಮೀನು ರಹಿತ ವಾರಂಟ್ ಪಡೆಯಲು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದೇವೆ. ಶೀಘ್ರದಲ್ಲೇ ಅವರನ್ನು ಮತ್ತೆ ಬಂಧಿಸಲಾಗುವುದು' ಎಂದು ಹಿರಿಯ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೂ ಒಬ್ಬ ಆರೋಪಿಯನ್ನು ಪೊಲೀಸರು ಗುರುತಿಸಿದ್ದು, ಶೀಘ್ರದಲ್ಲೇ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಬಂಧಿತ ಮೂವರಲ್ಲಿ ಇಬ್ಬರು ಎಸ್‌ಆರ್‌ಪಿಎಫ್ ಕಾನ್‌ಸ್ಟೆಬಲ್‌ಗಳ ಪುತ್ರರಾಗಿದ್ದರೆ, ಮೂರನೆಯವರು ಕಾರ್ಮಿಕನ ಮಗ. ಆಗಸ್ಟ್ 29 ರಂದು ನಿಗದಿಯಾಗಿದ್ದ ಪೊಲೀಸ್ ನೇಮಕಾತಿಗಾಗಿ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಲು ಅವರು ಆಗಸ್ಟ್ 28 ರಂದು ಮುಂಬೈಗೆ ಪ್ರಯಾಣಿಸುತ್ತಿದ್ದರು. ಪರೀಕ್ಷೆಗಳ ನಂತರ ಅವರು ತಮ್ಮ ಊರಿಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News