ಮಣಿಪುರ ಹಿಂಸಾಚಾರ : 27 ಎಫ್ಐಆರ್‌ಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು 19 !

ಕಳೆದ ನಾಲ್ಕು ತಿಂಗಳಲ್ಲಿ 160 ಮಂದಿಯನ್ನು ಬಲಿ ಪಡೆದಿರುವ ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರದ ಸಂಬಂಧ ದಾಖಲಾಗಿರುವ 27 ಎಫ್ಐಆರ್‌ಗಳ ತನಿಖೆಯನ್ನು ಸಿಬಿಐ

Update: 2023-08-30 16:50 GMT
PHOTO :PTI

ಇಂಫಾಲ: ಕಳೆದ ನಾಲ್ಕು ತಿಂಗಳಲ್ಲಿ 160 ಮಂದಿಯನ್ನು ಬಲಿ ಪಡೆದಿರುವ ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರದ ಸಂಬಂಧ ದಾಖಲಾಗಿರುವ 27 ಎಫ್ಐಆರ್‌ಗಳ ತನಿಖೆಯನ್ನು ಸಿಬಿಐ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು deccanherald.com ವರದಿ ಮಾಡಿದೆ.

ಈ ಪೈಕಿ 19 ಮಹಿಳೆಯರ ವಿರುದ್ಧದ ಅಪರಾಧ, 3 ಶಸ್ತ್ರಸಜ್ಜಿತ ಗುಂಪಿನಿಂದ ಲೂಟಿ, 2 ಹತ್ಯೆ ಹಾಗೂ ತಲಾ ಒಂದು ಗಲಭೆ ಮತ್ತು ಹತ್ಯೆ ಹಾಗೂ ಅಪಹರಣ ಮತ್ತು ಸಾಮಾನ್ಯ ಅಪರಾಧ ಪಿತೂರಿಗೆ ಸಂಬಂಧಿಸಿದ ಎಫ್ಐಆರ್‌ಗಳಾಗಿವೆ ಎಂದು ವಿಶ‍್ವಾಸಾರ್ಹ ಮೂಲಗಳು ತಿಳಿಸಿವೆ.

ಸಿಬಿಐ ಈ ಪ್ರಕರಣಗಳನ್ನು ಮರು ದಾಖಲಿಸಿಕೊಂಡಿದ್ದರೂ, ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಈ ವಿವರಗಳ ಗೌಪ್ಯತೆ ಕಾಪಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧ ನಡೆದ ಸ್ಥಳಗಳಿಗೆ ಭೇಟಿ ನೀಡಿದ ನಂತರ ಶಂಕಿತರು ಹಾಗೂ ಸಂತ್ರಸ್ತರನ್ನು ಸಿಬಿಐ ತಂಡವು ವಿಚಾರಣೆಗೊಳಪಡಿಸಿದೆ ಎಂದೂ ಮೂಲಗಳು ತಿಳಿಸಿವೆ.

ಪ್ರಕರಣಗಳ ತನಿಖೆ ನಡೆಸಲು ದೇಶದ ವಿವಿಧ ಭಾಗಗಳಲ್ಲಿನ ಕೇಂದ್ರ ತನಿಖಾ ಸಂಸ್ಥೆಯ ಘಟಕಗಳಿಂದ 29 ಮಹಿಳಾ ಅಧಿಕಾರಿಗಳು ಸೇರಿದಂತೆ 53 ಅಧಿಕಾರಿಗಳ ತಂಡವನ್ನು ಸಿಬಿಐನ ಉನ್ನತಾಧಿಕಾರಿಗಳು ರಚಿಸಿದ ನಂತರ ತನಿಖೆಯು ಚುರುಕುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದ ಸಮಾಜವು ಜನಾಂಗೀಯ ಆಧಾರದಲ್ಲಿ ವಿಭಜನೆಗೊಂಡಿರುವುದರಿಂದ, ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ಒಂದು ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ, ಮತ್ತೊಂದು ಸಮುದಾಯದ ಪರ ಪಕ್ಷಪಾತ ಧೋರಣೆ ಪ್ರದರ್ಶಿಸಿದ ಆರೋಪಕ್ಕೀಡಾಗಬಹುದಾದ ಸಂಕೀರ್ಣ ಸವಾಲನ್ನು ಸಿಬಿಐ ಎದುರಿಸುತ್ತಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News