ಕಾನೂನು ಕ್ಷೇತ್ರದಲ್ಲಿ ಲಿಂಗಭೇದ ಪದಗಳ ತಡೆಗೆ ಸುಪ್ರೀಂಕೋರ್ಟ್ ನಿಂದ ಕೈಪಿಡಿ

Update: 2023-08-16 15:39 GMT

Supreme Court | Photo : PTI  

ಹೊಸದಿಲ್ಲಿ: ತೀರ್ಪು, ಆದೇಶ, ಮನವಿ, ಹೇಳಿಕೆ ನೀಡುವ ಸಂದರ್ಭ ನ್ಯಾಯಾಧೀಶರು, ನ್ಯಾಯವಾದಿಗಳು ಬಳಸಬಾರದಂತಹ ಪದಗಳು, ನುಡಿಗಟ್ಟುಗಳು ಮತ್ತು ಅವುಗಳಿಗೆ ಪರ್ಯಾಯಗಳನ್ನೊಳಗೊಂಡ ಕೈಪಿಡಿಯೊಂದನ್ನು ಸುಪ್ರೀಂಕೋರ್ಟ್ ಆಗಸ್ಟ್ 16ರಂದು ಪ್ರಕಟಿಸಿದೆ.

ಆದರೆ ಈ ಕೈಪಿಡಿಯು ದೇಶದ ನ್ಯಾಯಾಧೀಶರುಗಳು ಹಾಗೂ ನ್ಯಾಯವಾದಿಗಳು ಈವರೆಗೆ ನಡೆಸಿದ ಕೆಲಸಗಳ ಟೀಕೆಯೆಂಬುದಾಗಿ ಅರ್ಥೈಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ತಿಳಿಸಿದ್ದಾರೆ.

‘‘ಕಾನೂನು ಸಂವಾದದಲ್ಲಿ ಮಹಿಳೆಯರ ಕುರಿತಾದ ರೂಢಿಗತ ಅಭಿಪ್ರಾಯಗಳನ್ನು ಗುರುತಿಸಲು, ಅರಿಯಲು ಹಾಗೂ ಅವುಗಳ ವಿರುದ್ಧ ಹೋರಾಡಲು ನ್ಯಾಯಾಧೀಶರು ಹಾಗೂ ಕಾನೂನುವೇತ್ತ ಸಮುದಾಯಕ್ಕೆ ಈ ಪುಸ್ತಕವು ನೆರವಾಗಲಿದೆ. ಈ ಕೈಪಿಡಿ ನ್ಯಾಯಾಲಯಗಳಲ್ಲಿ ಬಳಸಬಾರದ ಲಿಂಗ ತಾರತಮ್ಯದ ಶಬ್ದಗಳು ಹಾಗೂ ಅವುಗಳ ಬದಲಿಗೆ ಮನವಿಗಳ ಕರಡನ್ನು ಬರೆಯುವಾಗ , ಆದೇಶ ಮತ್ತು ತೀರ್ಪುಗಳನ್ನು ನೀಡುವಾಗ ಬಳಸಬಹುದಾದ ಪರ್ಯಾಯ ಪದಗಳು ಹಾಗೂ ನುಡಿಗಟ್ಟುಗಳ ಪದಕೋಶವನ್ನು 30 ಪುಟಗಳ ಈ ಕೈಪಿಡಿ ಹೊಂದಿದೆ.

ರೂಢಿಗತವಾದ ಪದಗಳ ಬಳಕೆಯಿಂದ ನ್ಯಾಯಾಲಯದ ತೀರ್ಪಿನಲ್ಲಿ ವ್ಯತ್ಯಾಸವಾಗಲಾರದು. ಆದರೆ ನಮ್ಮ ಸಂವಿಧಾನ ಪ್ರತಿಪಾದಿಸುವ ಮೌಲ್ಯಗಳಿಗೆ ಅವು ವ್ಯತಿರಿಕ್ತವಾಗಿವೆ ಎಂದು ಅವರು ಹೇಳಿದರು.

ನ್ಯಾಯವಾದಿಗಳು ಹಾಗೂ ನಾಯಾಧೀಶರು ಕಾನೂನು ಸಂವಾದದ ಸಂದರ್ಭ ಬಳಸುವ ಹಲವಾರು ಪದಗಳು ಹಾಗೂ ನುಡಿಗಟ್ಟುಗಳು ಹಳೆಯಕಾಲದ ಚಿಂತನೆಗಳನ್ನು ಪ್ರತಿಂಬಿಸುತ್ತಿವೆ ಹಾಗೂ ಪುರುಷಪ್ರಾಧಾನ್ಯತೆಯ ಒಳಧ್ವನಿಯನ್ನು ಹೊಂದಿವೆ ಎಂದು ಚಂದ್ರಚೂಡ್ ಅವರು ಗಮನಸೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News