ಬೇಡಿಕೆಗಳಿಗೆ ಒಪ್ಪಿದ ಮಹಾರಾಷ್ಟ್ರ ಸರ್ಕಾರ; ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಮನೋಜ್ ಪಾಟೀಲ್
ಮುಂಬೈ: ಮರಾಠಾ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಮನೋಜ್ ಜಾರಂಗೆ ಪಾಟೀಲ್ ಅವರ ಎಲ್ಲಾ ಬೇಡಿಕೆಗಳನ್ನು ಮಹಾರಾಷ್ಟ್ರ ಸರ್ಕಾರ ಒಪ್ಪಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಪ್ರತಿಭಟನೆಯನ್ನು ಇಂದು ಅಂತ್ಯಗೊಳಿಸಿದ್ದಾರೆ. ಶುಕ್ರವಾರದಿಂದ ಮುಂಬೈಯಲ್ಲಿ ಪಾಟೀಲ್ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಮರಾಠ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ ವಿಭಾಗದಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಅವರು ಬೇಡಿಕೆಯಿಟ್ಟಿದ್ದರು.
ಎಲ್ಲಾ ಮರಾಠರಿಗೆ ಕುನ್ಬಿ ಪ್ರಮಾಣಪತ್ರಗಳು, ಕಿಂಡರ್‌ಗಾರ್ಟನ್‌ನಿಂದ ಸ್ನಾತ್ತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ, ಮರಾಠರಿಗೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿಗಾಗಿ ಅವರು ಬೇಡಿಕೆಯಿಟ್ಟಿದ್ದರು.
ಇಲ್ಲಿಯ ತನಕ 37 ಲಕ್ಷ ಕುನ್ಬಿ ಪ್ರಮಾಣಪತ್ರಗಳನ್ನು ನೀಡಲಾಗಿದ್ದರೆ ಈ ಸಂಖ್ಯೆ 50 ಲಕ್ಷಕ್ಕೇರಲಿದೆ ಎಂದ ಪಾಟೀಲ್ ಹೇಳಿದ್ದಾರೆ. ಕುನ್ಬಿ ಎಂದರೆ ಇತರ ಹಿಂದುಳಿದ ವರ್ಗಗಳು ಎಂದರ್ಥವಾಗಿದೆ.
ತನ್ನ ಬೇಡಿಕೆ ಈಡೇರದಿದ್ದರೆ ಮುಂಬೈನ ಆಜಾದ್ ಮೈದಾನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಹೇಳಿದ್ದ 40 ವರ್ಷದ ಪಾಟೀಲ್ “ ಸರಕಾರ ಒಪ್ಪದೇ ಇದ್ದರೆ, ನಾವೇನು ಮಾಡಬಹುದು ಎಂದು ತೋರಿಸುತ್ತೇವೆ,” ಎಂದಿದ್ದರು.
ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಇಬ್ಬರು ಸಚಿವರು ಪಾಟೀಲ್ ಅವರನ್ನು ಭೇಟಿಯಾಗಿದ್ದರು ಹಾಗೂ ಸರಕಾರ ಅವರ ಎಲ್ಲಾ ಬೇಡಿಕೆಗಳಿಗೆ ಒಪ್ಪಿದೆ ಎಂದು ಹೇಳಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತಿ ಏಕನಾಥ್ ಶಿಂಧೆ ಕೂಡ ಆಗಮಿಸಿದ್ದಾರೆ.
ಪಾಟೀಲ್ ಅವರು ಇಂದು ವಾಶಿಯಲ್ಲಿ ವಿಜಯೋತ್ಸವ ಆಚರಿಸಲಿದ್ದಾರೆಂದು ತಿಳಿದು ಬಂದಿದೆ.