2024ರ ಚುನಾವಣೆಯಲ್ಲಿ ಏಕಾಂಗಿ ಹೋರಾಟಕ್ಕೆ ಸಿದ್ಧತೆ: ಮಾಯಾವತಿ

Update: 2023-07-19 08:54 GMT

ಮಾಯಾವತಿ

ಹೊಸದಿಲ್ಲಿ: ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಪಕ್ಷ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ, ಮುಂಬರುವ ಸಾರ್ವತ್ರಿಕ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಾಂಗಿಯಾಗಿ ಎದುರಿಸಲು ಉದ್ದೇಶಿಸಿದೆ ಎಂದು ಬುಧವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷದ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಹೇಳಿದರು.

"ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣ, ನಮ್ಮ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಮತ್ತು ನಾವು ದೇಶಾದ್ಯಂತ ಸಭೆಗಳನ್ನು ನಡೆಸುತ್ತಿದ್ದೇವೆ" ಎಂದು ಅವರು ತಿಳಿಸಿದರು.

2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಎನ್‌ಡಿಎ ಹಾಗೂ ಐಎನ್‌ಡಿಐಎ (INDIA) ಸಭೆಗಳನ್ನು ನಡೆಸಿರುವ ಬೆನ್ನಲ್ಲೇ ಮಾಯಾವತಿ ಅವರ ಈ ಹೇಳಿಕೆಗಳು ಹೊರ ಬಂದಿವೆ.

ಇದಲ್ಲದೆ, ಐಎನ್‌ಡಿಐಎ ಮತ್ತು ಎನ್‌ಡಿಎ ಮೈತ್ರಿಕೂಟದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಅವರು, ಕಾಂಗ್ರೆಸ್‌ನ ಭರವಸೆಗಳು "ಪೊಳ್ಳು" ಎಂದು ಬಣ್ಣಿಸಿದ್ದಾರೆ. 'ಈ ಪಕ್ಷಗಳು ದಲಿತರಿಗೆ ಏನೂ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಭರವಸೆಗಳು ಯಾವಾಗಲೂ ಪೊಳ್ಳಾಗಿರುತ್ತವೆ. ಜಾತಿವಾದಿ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತಿದೆ. ಇದು ಜಾತಿವಾದಿ ಪಕ್ಷಗಳ ಮೈತ್ರಿ' ಎಂದು ಅವರು ಹೇಳಿದ್ದಾರೆ.

ತಮ್ಮ ಪಕ್ಷವು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣಗಳಲ್ಲಿ ಸ್ವಂತ ಬಲದ ಮೇಲೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಮತ್ತು ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News