“ಬಹುಷಃ ನನಗೆ ಆಹ್ವಾನ ನೀಡಲು ಅವರಿಗೆ ಹಿಂಜರಿಕೆಯಿರಬಹುದು” : ಬಿಜೆಪಿಯ ಮೆಗಾ ಯಾತ್ರೆಗೆ ಆಹ್ವಾನ ನೀಡದಿರುವ ಕುರಿತು ಉಮಾ ಭಾರತಿ ಪ್ರತಿಕ್ರಿಯೆ

ಮುಂಬರುವ ವಿಧಾನ ಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರವಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಉದ್ಘಾಟಿಸಿದ ಜನಾಶಿರ್ವಾದ ಯಾತ್ರೆಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಅವರನ್ನು ಪಕ್ಷ ಕಡೆಗಣಿಸಿದೆ.

Update: 2023-09-03 19:08 GMT

ಭೋಪಾಲ್ : ಮುಂಬರುವ ವಿಧಾನ ಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರವಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಉದ್ಘಾಟಿಸಿದ ಜನಾಶಿರ್ವಾದ ಯಾತ್ರೆಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಅವರನ್ನು ಪಕ್ಷ ಕಡೆಗಣಿಸಿದೆ. ಈ ಬಗ್ಗೆ ಅಸಮಾಧಾನ ಹೊರಹಾಕಿದ, ಬಿಜೆಪಿಯ ಫೈರ್ಬ್ರಾಂಡ್ ಆಗಿದ್ದ ಉಮಾಭಾರತಿ, ಒಂದು ವೇಳೆ ನಾನು ಅಲ್ಲಿದ್ದರೆ ಜನರ ಗಮನ ನನ್ನೆಡೆಗೆ ಸೆಳೆಯಯಬಹುದು ಎಂಬ ಹಿಂಜರಿಕೆಯಿಂದ ಪಕ್ಷ ಈ ರೀತಿ ಮಾಡಿರಬಹುದು ಎಂದಿದ್ದಾರೆ.

2022ರಲ್ಲಿ ಜ್ಯೋತಿರಾಧ್ಯ ಸಿಂಧಿಯಾ ಪಕ್ಷಕ್ಕೆ ಅಧಿಕಾರಕ್ಕೆ ಬರಲು ಸಹಾಯ ಮಾಡಿದಂತೆ 2003ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಾಯ ಮಾಡಿದ್ದೇನೆ ಎಂದು ಎನ್ಡಿಟಿವಿಗೆ ಪ್ರತಿಕ್ರಿಯಿಸಿದ್ದಾರೆ.

ಸಿಂಧಿಯಾ ನನ್ನ ಸೋದರಳಿಯನಂತೆ. ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಬಹುದಿತ್ತು. ಹೋಗುವುದು ಬಿಡುವುದು ನನಗೆ ಬಿಟ್ಟಿದ್ದು. ಆದರೂ ನಾನು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ, ಎಂದು ಒಂದು ಕಾಲದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಉಮಾ ಭಾರತಿ ಹೇಳಿದರು.

ಉಮಾಭಾರತಿಯವರನ್ನು ಕೈ ಬಿಟ್ಟಿರುವ ಕುರಿತು ಬಿಜೆಪಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿರೋಧ ಪಕ್ಷ ಕಾಂಗ್ರೆಸ್ ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವುನ್ನು ಇದು ದೃಢಪಡಿಸಿದೆ. ರಾಮ ಮಂದಿರ ಹೋರಾಟದಲ್ಲಿ ಮುಂಚೂಣಿಯ್ಲಲಿದ್ದವರನ್ನೇ ಬದಿಗೆ ಸರಿಸಲಾಗುತ್ತಿದೆ ಎಂದಿದೆ.

ಭೋಪಾಲ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಇದು ನಾಯಕರಿಗೆ ಮಾಡುತ್ತಿರುವ ಅವಮಾನ ಎಂದು ಕಿಡಿಕಾರಿದ್ದಾರೆ. ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿಯರನ್ನೇ ಪಕ್ಷದಲ್ಲಿ ಬದಿಗೆ ಸರಿಸಲಾಯಿತು. ಬಳಿಕ ಮುರಳಿ ಮನೋಹರ್ ಜೋಷಿ. ನಮ್ಮ ಸಂಸ್ಕೃತಿಯ ಪ್ರಕಾರ ಹಿರಿಯರನ್ನು ಗೌರವಿಸದವರನ್ನು ದೇವರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

2003ರಲ್ಲಿ ಮಧ್ಯಪ್ರದೇಶದಲ್ಲಿ ದಿಗ್ವಿಜಯ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಆಡಳಿತಕ್ಕೆ ಅಂತ್ಯ ಹಾಡಿದ್ದ ಉಮಾಭಾರತಿ 3/4ರಷ್ಟು ಬಹುಮತ ಪಡೆದಿದ್ದರು. ಎರಡು ವರ್ಷಗಳ ಬಳಿಕ ಅವರನ್ನು ಅಶಿಸ್ತಿನ ಮೇಲೆ ೬ ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಛಾಟಿಸಲಾಗಿತ್ತು. 2011ರಲ್ಲಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಲಾಗಿತ್ತು.

2013ರಲ್ಲಿ ಉಮಾ ಭಾರತಿ ಅವರನ್ನು ಸೇರಿಸಿ 13 ಜನರನ್ನು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಬಲವರ್ಧನೆಗಾಗಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆ ಸಂದರ್ಭ ಯಶವಂತ ಸಿನ್ಹಾ ಅವರು ಅಪಾರ ಜನಪ್ರಿಯರಾಗಿದ್ದ ನರೇಂದ್ರ ಮೋದಿಯವರನ್ನು ಎನ್‌ಡಿಎಯ ಪ್ರಧಾನಿ ಅಭ್ಯರ್ಥಿಯಾಗಿಸುವ ಸಲಹೆಯನ್ನು ಬಹಿರಂಗವಾಗಿ ಟೀಕಿಸಿದ್ದರು. ಕೇವಲ ಜನಪ್ರಿಯತೆ ಪ್ರಧಾನಿ ಅಭ್ಯರ್ಥಿಯ ಆಯ್ಕೆಯ ಮಾನದಂಡವಲ್ಲ. ಜನಪ್ರಿಯತೆಯಿಲ್ಲದ ಹಿರಿಯ ನಾಯಕರೂ ಉತ್ತಮ ಪ್ರಧಾನಿಯಾಗಿ ಕಾರ್ಯನಿರ್ವಹಿಸಬಲ್ಲರು ಎಂದು ಎನ್ಡಿಟಿವಿಯೊಂದಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News