ಮಹಾರಾಷ್ಟ್ರ | 13 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ

Update: 2024-08-26 17:58 GMT

PHOTO : PTI

ವಾಶಿಮ್ (ಮಹಾರಾಷ್ಟ್ರ): ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ರಿಸೋಡ್ ಪಟ್ಟಣದಲ್ಲಿ 13 ವರ್ಷದ  ಬಾಲಕಿಯನ್ನು ಅಪಹರಿಸಿದ ಮೂವರು, ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಸೋಮವಾರ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವು ಆಗಸ್ಟ್ 20 ರಂದು ನಡೆದಿದ್ದು, ಮರುದಿನ ಬಾಲಕಿ ಮನೆಗೆ ಮರಳಿದ ನಂತರ ರಿಸೋಡ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಕೆಯ ಮೇಲಿನ ದೌರ್ಜನ್ಯವನ್ನು ವೈದ್ಯಕೀಯ ವರದಿ ದೃಢಪಡಿಸಿದೆ ಎನ್ನಲಾಗಿದೆ.

ಆರೋಪಿಗಳ ಬೆನ್ನತ್ತಿದ ಪೊಲೀಸರು, ಆಗಸ್ಟ್ 22ರಂದು ಗುರುವಾರ ಮೂವರನ್ನು ಈ ಸಂಬಂಧ ಬಂಧಿಸಿದ್ದಾರೆ. ಆರೋಪಿಗಳನ್ನು ಪಂಢರಿ ಫುಪಾಟೆ, ಸೂರ್ಯಭಾನ್ ಫುಪಾಟೆ ಮತ್ತು ಗಣೇಶ್ ಫುಪಾಟೆ ಎಂದು ಗುರುತಿಸಲಾಗಿದೆ. ಅಪಹರಣ, ಅತ್ಯಾಚಾರ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿತರ ಮೇಲೆ ಆರೋಪ ಹೊರಿಸಲಾಗಿದೆ ಎಂದು ವಾಶಿಮ್ ಎಸ್ಪಿ ಅನುಲ್ ತಾರೆ, ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಬಾಲಕಿಯ ಪೊಲೀಸರ ಹೇಳಿಕೆಯ ಪ್ರಕಾರ, ಆಗಸ್ಟ್ 20 ರಂದು ಸಂಜೆ ನಗರದ ಮುಂಗ್ಸಾಜಿ ನಗರ ಪ್ರದೇಶದಲ್ಲಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಮೂವರು ಆರೋಪಿಳು ಆಕೆಯನ್ನು ಅಪಹರಿಸಿ, ಮುಂಗ್ಸಾಜಿ ನಗರದ ಸಮೀಪವಿರುವ ನಿರ್ಜನ ಗುಡ್ಡಗಾಡು ಪ್ರದೇಶದಲ್ಲಿನ ಸಣ್ಣ ಗುಡಿಸಲಿಗೆ ಕರೆದೊಯ್ದಿದಿದ್ದಾರೆ. ಅಲ್ಲಿ ಆಕೆಯನ್ನು ಕೂಡಿ ಹಾಕಿದ ಆರೋಪಿಗಳು ರಾತ್ರಿಯಿಡೀ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.

ಮರುದಿನ, ಬಂಧಮುಕ್ತಗೊಳಿಸಿದ ಮನೆಗೆ ತಲುಪಿದ ಬಾಲಕಿ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ವಿವರಿಸಿದ್ದಾಳೆ ಎನ್ನಲಾಗಿದೆ. ಬಳಿಕ ಕುಟುಂಬವು ಪೊಲೀಸ್ ದೂರು ದಾಖಲಿಸಿತು ಎಂದು ತಿಳಿದು ಬಂದಿದೆ. ಮೂವರು ಆರೋಪಿಗಳನ್ನು ವಾಶಿಮ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News