"ನನ್ನ ಪತ್ನಿಗೆ ಹೆದರುತ್ತಿದ್ದೆ": ಒಂದು ವರ್ಷದಿಂದ ನಾಪತ್ತೆಯಾಗಿದ್ದ ಕೇರಳದ ವ್ಯಕ್ತಿ ಪತ್ತೆ !
ಇಡುಕ್ಕಿ (ಕೇರಳ): ಒಂದೂವರೆ ವರ್ಷದ ಹಿಂದೆ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿನ ತನ್ನ ಬಾಡಿಗೆ ಮನೆಯಿಂದ ಕಾಣೆಯಾಗಿದ್ದ 34 ವರ್ಷದ ಪುರುಷನೊಬ್ಬ ಇಡುಕ್ಕಿ ಜಿಲ್ಲೆಯ ತೋಡುಪುಳದ ಬಳಿಯ ಗ್ರಾಮವೊಂದರಲ್ಲಿ ಪತ್ತೆಯಾಗಿದ್ದಾನೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ನೌಶಾದ್ ನಾಪತ್ತೆ ಪ್ರಕರಣದ ಸಂಬಂಧ ಆತನ 25 ವರ್ಷದ ಪತ್ನಿ ಅಫ್ಸಾನಾಳನ್ನು ಪೊಲೀಸರು ಬಂಧಿಸಿದ ಮರುದಿನ ಆತ ತೋಡುಪುಳ ಬಳಿಯ ತೊಮ್ಮನ್‌ಕುತ್ತು ಗ್ರಾಮದಲ್ಲಿ ಪತ್ತೆಯಾಗಿದ್ದಾನೆ. ಇದಕ್ಕೂ ಮುನ್ನ, ನೌಶಾದ್‌ನನ್ನು ಹತ್ಯೆಗೈದು, ಆತನನ್ನು ಹೂತು ಹಾಕಲಾಗಿದೆ ಎಂದು ನೌಶಾದ್ ಪತ್ನಿಯು ಪೊಲೀಸರಿಗೆ ಹೇಳಿಕೆ ನೀಡಿದ್ದಳು.
ಪೊಲೀಸರ ಪ್ರಕಾರ, ಪಟ್ಟಣಂತಿಟ್ಟ ಜಿಲ್ಲೆಯ ಕಲಂಜೂರ್ ಪ್ರದೇಶದಲ್ಲಿನ ತನ್ನ ಬಾಡಿಗೆ ಮನೆಯಿಂದ ನವೆಂಬರ್ 21ರಂದು ನೌಶಾದ್ ಕಾಣೆಯಾಗಿದ್ದ. ಇದಾದ ನಂತರ, ಆತ ತೊಮ್ಮನ್‌ಕುತ್ತು ಗ್ರಾಮದ ಹೊಲವೊಂದರಲ್ಲಿ ಕೃಷಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ.
ಈ ಕುರಿತು ತೋಡುಪುಳದಲ್ಲಿ ವರದಿಗಾರರೊಂದಿಗೆ ಮಾತನಾಡಿರುವ ನೌಶಾದ್, "ನಾನು ನನ್ನ ಪತ್ನಿಗೆ ಹೆದರುತ್ತಿದ್ದುದರಿಂದ ಮನೆ ತೊರೆದೆ" ಎಂದು ತಿಳಿಸಿದ್ದಾನೆ.
ನನ್ನ ಪತ್ನಿ ಕರೆಸುತ್ತಿದ್ದ ವ್ಯಕ್ತಿಗಳು ನನ್ನನ್ನು ಥಳಿಸುತ್ತಿದ್ದರು ಎಂದು ಆತ ದೂರಿದ್ದಾನೆ.
ಅಫ್ಸಾನಾ ಪೊಲೀಸರಿಗೆ ದಾರಿ ತಪ್ಪಿಸುವ ಹೇಳಿಕೆ ನೀಡಿದ ನಂತರ ಆಕೆಯನ್ನು ಪಟ್ಟಣಂತಿಟ್ಟ ಜಿಲ್ಲೆಯ ಕೂದಲ್ ಗ್ರಾಮದಿಂದ ಗುರುವಾರ ಪೊಲೀಸರು ಬಂಧಿಸಿದ್ದರು.
ನಾನು ನೌಶಾದ್‌ನನ್ನು ಹತ್ಯೆಗೈದು, ಆತನನ್ನು ಹೂತು ಹಾಕಿದ್ದೇನೆ ಎಂದು ಅಫ್ಸಾನಾ ನೀಡಿದ್ದ ಹೇಳಿಕೆಯನ್ನು ಆಧರಿಸಿ, ಆತನ ಮೃತದೇಹವನ್ನು ವಶಪಡಿಸಿಕೊಳ್ಳಲು ಪೊಲೀಸರು ಆಕೆಯನ್ನು ಕೆಲವು ನಿರ್ದಿಷ್ಟ ಸ್ಥಳಗಳಿಗೆ ಕರೆದೊಯ್ದಿದ್ದರು.
ನೌಷಾದ್ ತಂದೆಯ ದೂರನ್ನು ಆಧರಿಸಿ ಆತನ ನಾಪತ್ತೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು, ನಾನು ಇತ್ತೀಚೆಗಷ್ಟೇ ನೌಶಾದ್‌ನನ್ನು ನೋಡಿದ್ದೆ ಎಂಬ ಹೇಳಿಕೆ ನೀಡಿದ್ದ ಅಫ್ಸಾನಾಳಿಗೆ ಎರಡು ದಿನಗಳ ನಂತರ ಕೂದಲ್ ಪೊಲೀಸ್ ಠಾಣೆಗೆ ಬರುವಂತೆ ನಿರ್ದೇಶನ ನೀಡಿದ್ದರು.