ಜಗತ್ತಿನ ಕಾರ್ಖಾನೆಯಾಗಿ ಹೊರಹೊಮ್ಮುತ್ತಿರುವ ಭಾರತ: ಮೋದಿ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಭಾರತವು ಅನಂತ ಹೊಸತನಗಳ ನೆಲ ಎಂಬುದಾಗಿ ಶನಿವಾರ ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶವು ಈಗ ಪ್ರಪಂಚದ ಹೊಸ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
‘‘ಒಂದು ಕಾಲದಲ್ಲಿ, ಭಾರತವನ್ನು ಜಗತ್ತು ತನ್ನ ಲೆಕ್ಕಪತ್ರವನ್ನು ನೋಡಿಕೊಳ್ಳುವ ಕಚೇರಿ (ಬ್ಯಾಕ್ ಆಫೀಸ್) ಎಂಬುದಾಗಿ ಕರೆಯುತ್ತಿತ್ತು. ಈಗ ಭಾರತವು ಜಗತ್ತಿನ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ. ನಾವೀಗ ಕೇವಲ ‘ವರ್ಕ್‌ಫೋರ್ಸ್’ (ಕೆಲಸಗಾರರು) ಅಲ್ಲ, ‘ವರ್ಲ್ಡ್ ಫೋರ್ಸ್’ (ಜಾಗತಿಕ ಶಕ್ತಿ) ಆಗಿದ್ದೇವೆ’’ ಎಂದು ಇಲ್ಲಿ ನಡೆದ ಎನ್‌ಎಕ್ಸ್‌ಟಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಹೇಳಿದರು.
ಜಗತ್ತು ಈಗ 21ನೇ ಶತಮಾನದ ಭಾರತವನ್ನು ಕುತೂಹಲದಿಂದ ಗಮನಿಸುತ್ತಿದೆ, ಅದರ ಸಂಘಟನಾ ಮತ್ತು ಸಂಶೋಧನಾತ್ಮಕ ಸಾಮರ್ಥ್ಯಗಳನ್ನು ನೋಡುತ್ತಿದೆ ಎಂದು ಅವರು ಹೇಳಿದರು.
‘ವೋಕಲ್ ಫಾರ್ ಲೋಕಲ್’ ಅಭಿಯಾನದಡಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ತನ್ನ ಸರಕಾರದ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ ಅವರು, ಅವುಗಳು ಈಗ ಫಲಕೊಡಲು ಆರಂಭಿಸಿವೆ ಎಂದರು. ಭಾರತೀಯ ಉತ್ಪನ್ನಗಳಿಗೆ ಈಗ ಜಾಗತಿ ಬೇಡಿಕೆ ಮತ್ತು ಸ್ವೀಕೃತಿ ಲಭಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.