ಬಹುತೇಕ ಭಾರತೀಯ ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದಾರೆ: ಗುಲಾಮ್ ನಬಿ ಆಝಾದ್

Update: 2023-08-17 18:19 GMT

ಗುಲಾಮ್ ನಬಿ ಆಝಾದ್ | Photo : PTI 

ಜಮ್ಮು: ಬಹುತೇಕ ಭಾರತೀಯ ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದು, ಇದಕ್ಕೆ ನಿದರ್ಶನವೆಂದರೆ, ಕಾಶ್ಮೀರ ಕಣಿವೆಯ ಕಾಶ್ಮೀರಿ ಪಂಡಿತರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದು ಎಂದು ಡಿಪಿಎಪಿ (Democratic Progressive Azad Party) ಅಧ್ಯಕ್ಷ ಗುಲಾಮ್ ನಬಿ ಆಝಾದ್ ಹೇಳಿದ್ದಾರೆ.

ರಾಜಕೀಯ ಲಾಭ ಪಡೆಯಲು ಧರ್ಮವನ್ನು ಬಳಸಬಾರದು ಎಂದು ಅಭಿಪ್ರಾಯಪಟ್ಟಿರುವ ಆಝಾದ್, ಯಾರೆಲ್ಲ ರಾಜಕೀಯದಲ್ಲಿ ಧರ್ಮಾಶ್ರಯ ಪಡೆಯುತ್ತಾರೊ ಅವರೆಲ್ಲ ದುರ್ಬಲರು ಎಂದು ವ್ಯಾಖ್ಯಾನಿಸಿದ್ದಾರೆ.

“ಕೆಲವು ಬಿಜೆಪಿ ನಾಯಕರು ಮುಸ್ಲಿಮರು ಹೊರಗಿನಿಂದ ಬಂದಿದ್ದಾರೆ ಎಂದು ಹೇಳುತ್ತಾರೆ, ಮತ್ತೆ ಕೆಲವರು ಇಲ್ಲವೆನ್ನುತ್ತಾರೆ. ಯಾರೂ ಕೂಡಾ ಹೊರಗಡೆಯಿಂದಲೂ ಬಂದಿಲ್ಲ; ಒಳಗಡೆಯಿಂದಲೂ ಬಂದಿಲ್ಲ. ಇಸ್ಲಾಂ ಧರ್ಮ 1,500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಹಿಂದೂ ಧರ್ಮವು ಪುರಾತನ ಧರ್ಮವಾಗಿದೆ. ಮೊಘಲ್ ಸೈನ್ಯದಲ್ಲಿದ್ದ ಸುಮಾರು 10-20 ಮಂದಿ ಮಾತ್ರ ಹೊರಗಿನಿಂದ ಬಂದಿರಬಹುದು” ಎಂದು ಗುಲಾಮ್ ನಬಿ ಆಝಾದ್ ದೋಹಾ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ.

“ಭಾರತದಲ್ಲಿನ ಇತರ ಎಲ್ಲ ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರಗೊಂಡವರಾಗಿದ್ದಾರೆ. ಇದಕ್ಕೆ ಕಾಶ್ಮೀರದ ನಿದರ್ಶನವನ್ನು ನೋಡಬಹುದು. 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಯಾರು ಮುಸ್ಲಿಮರಿದ್ದರು? ಎಲ್ಲರೂ ಕಾಶ್ಮೀರ ಪಂಡಿತರೇ ಆಗಿದ್ದರು. ಅವರು ಇಸ್ಲಾಂಗೆ ಮತಾಂತರಗೊಂಡರು. ಎಲ್ಲರೂ ಈ ಧರ್ಮದಲ್ಲಿ ಜನಿಸಿದರು” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳೂ ಆದ ಆಝಾದ್ ತಿಳಿಸಿದ್ದಾರೆ.

“ಹಿಂದೂಗಳು ಮೃತಪಟ್ಟಾಗ ಅವರನ್ನು ವಿವಿಧ ಸ್ಥಳಗಳಲ್ಲಿ ಸುಡಲಾಗುತ್ತದೆ. ನಂತರ ಅವರ ಚಿತಾಭಸ್ಮವನ್ನು ನೀರಿನಲ್ಲಿ ಮಿಶ್ರಣಗೊಳ್ಳುವ ನದಿಯಲ್ಲಿ ತೇಲಿ ಬಿಡಲಾಗುತ್ತದೆ ಮತ್ತು ನಾವದನ್ನು ಕುಡಿಯುತ್ತೇವೆ” ಎಂದು ಆಝಾದ್ ಹೇಳಿದ್ದಾರೆ.

“ಇದಾದ ನಂತರ ನೀರಿನಲ್ಲಿ ಅವರ ಚಿತಾಭಸ್ಮವಿದೆ ಎಂದು ಯಾರು ನೋಡುತ್ತಾರೆ? ಜನ ಆ ನೀರನ್ನು ಕುಡಿಯುತ್ತಾರೆ” ಎಂದು ಅವರು ಹೇಳಿದ್ದಾರೆ.

ಇದೇ ರೀತಿ ಮುಸ್ಲಿಮರ ಮಾಂಸ ಮತ್ತು ಮೂಳೆಗಳು ಈ ದೇಶದ ಮಣ್ಣಿನ ಭಾಗವಾಗುತ್ತವೆ ಎಂದಿರುವ ಆಝಾದ್, “ಅವೂ ಕೂಡಾ ಈ ನೆಲದ ಭಾಗವಾಗುತ್ತವೆ ಮತ್ತು ಅವರ ಮಾಂಸ ಮತ್ತು ಮೂಳೆಗಳು ಭಾರತ ಮಾತೆಯ ಮಣ್ಣಿನ ಭಾಗವಾಗುತ್ತವೆ. ಹಿಂದೂ ಮತ್ತು ಮುಸ್ಲಿಮರಿಬ್ಬರೂ ಈ ನೆಲದಲ್ಲಿ ಒಟ್ಟುಗೂಡುತ್ತಾರೆ. ಅವರ ನಡುವೆ ಇರುವ ವ್ಯತ್ಯಾಸವಾದರೂ ಏನು?” ಎಂದು ವಿಭಜನೆ ರಾಜಕೀಯ ಮಾಡುತ್ತಿರುವ ಕೋಮುವಾದಿ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News