ಏಶ್ಯದಲ್ಲಿ ಕಳೆದ ವರ್ಷ ಅತಿ ಹೆಚ್ಚು ಪ್ರಾಕೃತಿಕ ವಿಕೋಪ ; ಭಾರತದಲ್ಲಿ ಉಷ್ಣ ಮಾರುತಗಳಿಂದಾಗಿ 110 ಮಂದಿ ಸಾವು : ವಿಶ್ವ ಹವಾಮಾನ ಸಂಸ್ಥೆ ವರದಿ
ಹೊಸದಿಲ್ಲಿ: 2023ರಲ್ಲಿ ಹವಾಮಾನ ವಿಕೋಪಗಳು ಮತ್ತು ನೀರು ಸಂಬಂಧಿ ವಿಪತ್ತುಗಳಿಂದಾಗಿ ಏಶ್ಯ ಖಂಡವು ಅತಿ ಹೆಚ್ಚು ಹಾನಿ ಅನುಭವಿಸಿದೆ ಎಂದು ವಿಶ್ವ ಹವಾಮಾನ ಸಂಸ್ಥೆಯು ಬುಧವಾರ ಬಿಡುಗಡೆಗೊಳಿಸಿರುವ ವರದಿಯೊಂದು ತಿಳಿಸಿದೆ.
ಏಶ್ಯ ಖಂಡದಲ್ಲಿ ಹವಾಮಾನ ವೈಪರೀತ್ಯದ 79 ಘಟನೆಗಳು ಸಂಭವಿಸಿದ್ದು, 2,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ‘ದ ಸ್ಟೇಟ್ ಅಫ್ ದ ಕ್ಲೈಮೇಟ್ ಇನ್ ಏಶ್ಯ 2023’ ಎಂಬ ತಲೆಬರಹದ ವರದಿ ಹೇಳಿದೆ.
ಭಾರತದಲ್ಲಿ, ಕಳೆದ ವರ್ಷದ ಎಪ್ರಿಲ್ ಮತ್ತು ಜೂನ್ ನಡುವಿನ ಅವಧಿಯಲ್ಲಿ ತೀವ್ರ ಉಷ್ಣಮಾರುತಗಳಿಂದಾಗಿ 110 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಅಧೀನಕ್ಕೆ ಒಳಪಟ್ಟ ಸಂಸ್ಥೆಯ ವರದಿ ಹೇಳಿದೆ. ಅದು ತನ್ನ ವರದಿಗೆ ಬೇಕಾದ ಅಂಕಿಅಂಶಗಳನ್ನು ಬೆಲ್ಜಿಯಮ್ ನ ‘ಸೆಂಟರ್ ಫಾರ್ ರಿಸರ್ಚ್ ಆನ್ ದ ಎಪಿಡೆಮಿಯಾಲಜಿ ಆಫ್ ಡಿಸ್ಯಾಸ್ಟರ್ಸ್’ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO)ಯ ಜಂಟಿ ಉಪಕ್ರಮವಾಗಿರುವ ‘ಎಮರ್ಜನ್ಸಿ ಈವೆಂಟ್ಸ್ ಡೇಟಾಬೇಸ್’ನಿಂದ ಪಡೆದುಕೊಂಡಿದೆ.
ಕಳೆದ ವರ್ಷದ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ತೀವ್ರ ಮತ್ತು ಸುದೀರ್ಘ ಉಷ್ಣ ಮಾರುತಗಳಿಂದಾಗಿ ಬಾಂಗ್ಲಾದೇಶ ಮತ್ತು ಪೂರ್ವ ಭಾರತವನ್ನು ಒಳಗೊಂಡ ಆಗ್ನೇಯ ಏಶ್ಯ ನಲುಗಿದೆ ಎಂದು ತನ್ನ ವರದಿಯಲ್ಲಿ ವಿಶ್ವ ಹವಾಮಾನ ಸಂಸ್ಥೆ ತಿಳಿಸಿದೆ.
ಆಗಸ್ಟ್ನಲ್ಲಿ, ಭಾರತವು ದಾಖಲೆಯ ಅಧಿಕ ಸರಾಸರಿ ಮಾಸಿಕ ಉಷ್ಣತೆಯನ್ನು ಅನುಭವಿಸಿತು ಹಾಗೂ ಇದೇ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟು ಮಳೆಯ ಕೊರತೆಯನ್ನು ಎದುರಿಸಿತು.
ಕಳೆದ ವರ್ಷ ಭಾರತದಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ ತೀರಾ ಕಡಿಮೆಯಾಗಿತ್ತು ಹಾಗೂ 1971-2020ರ ಅವಧಿಯ ಸರಾಸರಿ 94 ಶೇ. ದಷ್ಟಿತ್ತು ಎಂದು ವರದಿ ತಿಳಿಸಿದೆ. ಅಂದರೆ, 1971 ಮತ್ತು 2020 ನಡುವಿನ ಅವಧಿಯಲ್ಲಿ ಬಿದ್ದ ಮಳೆಯ ಸರಾಸರಿಗಿಂತ 6 ಶೇ ದಷ್ಟು ಕಡಿಮೆ ಮಳೆ ಕಳೆದ ಜೂನ್ ಮತ್ತು ಸೆಪ್ಟಂಬರ್ ತಿಂಗಳ ನಡುವಿನ ಅವಧಿಯಲ್ಲಿ ಬಿದ್ದಿದೆ.
‘‘ನೈರುತ್ಯ ಭಾರತದ ಕೆಲವು ಪ್ರದೇಶಗಳು, ಗಂಗಾ ಮುಖಜಭೂಮಿ ಪ್ರದೇಶ ಮತ್ತು ಬ್ರಹ್ಮಪುತ್ರ ನದಿಯ ಕೆಳ ಪಾತ್ರದಲ್ಲಿ ಸತತ ಎರಡನೇ ವರ್ಷ ಸರಾಸರಿಗಿಂತ ಕಡಿಮೆ ಮಳೆ ಬಿದ್ದಿದೆ’’ ಎಂದು ವರದಿ ಹೇಳುತ್ತದೆ.
ಇದಕ್ಕೆ ಎಲ್ ನಿನೊ ಮತ್ತು ಹಿಂದೂ ಮಹಾಸಾಗರದ ಡೈಪೋಲ್ ಕಾರಣವಾಗಿರಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.
ಎಲ್ ನಿನೋ ಎಂದರೆ ಪೂರ್ವ ಮತ್ತು ಮಧ್ಯ ಪೆಸಿಫಿಕ್ ಸಾಗರದ ಮೇಲ್ಮೈ ಉಷ್ಣತೆಯಲ್ಲಿ ಹೆಚ್ಚಳವಾಗುವುದು. ಇದು ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ. ಒಂದು ಕಡೆ ಅತಿವೃಷ್ಟಿಯಾದರೆ ಇನ್ನೊಂದೆಡೆ ಅನಾವೃಷ್ಟಿಯಾಗುತ್ತದೆ.
ಹಿಂದೂ ಮಹಾಸಾಗರದ ಡೈಪೋಲ್ ಎಂದರೆ ಸಾಗರದ ಮೇಲ್ಮೈ ಉಷ್ಣತೆಯಲ್ಲಿ ಅನಿಯಮಿತ ಏರುಪೇರು ಆಗುವುದು.