ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟವರ ಮೃತದೇಹ ನದಿಗೆ ಎಸೆದಿರುವುದರಿಂದ ನೀರು ಕಲುಷಿತ: ಸಮಾಜವಾದಿ ಪಕ್ಷದ ಸಂಸದೆ ಜಯ ಬಚ್ಚನ್ ಆರೋಪ

Update: 2025-02-03 21:17 IST
ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟವರ ಮೃತದೇಹ ನದಿಗೆ ಎಸೆದಿರುವುದರಿಂದ ನೀರು ಕಲುಷಿತ: ಸಮಾಜವಾದಿ ಪಕ್ಷದ ಸಂಸದೆ ಜಯ ಬಚ್ಚನ್ ಆರೋಪ

ಜಯಾ ಬಚ್ಚನ್ PC | ndtv.com

  • whatsapp icon

ಹೊಸದಿಲ್ಲಿ : ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಕಳೆದ ತಿಂಗಳು ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ನದಿಗೆ ಎಸೆದಿರುವುದರಿಂದ ಅಲ್ಲಿನ ನೀರು ಕಲುಷಿತಗೊಂಡಿದೆ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಸೋಮವಾರ ಆರೋಪಿಸಿದ್ದಾರೆ.

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಸಾಮಾನ್ಯ ಜನರಿಗಾಗಿ ಯಾವುದೇ ವಿಶೇಷ ವ್ಯವಸ್ಥೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

‘‘ಈಗ ನೀರು ಎಲ್ಲಿ ಹೆಚ್ಚು ಕಲುಷಿತವಾಗಿದೆ ಎಂದರೆ, ಅದು ಕುಂಭಮೇಳದಲ್ಲಿ. ಕಾಲ್ತುಳಿತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ನದಿಗೆ ಎಸೆದಿರುವುದರಿಂದ ನೀರು ಕಲುಷಿತಗೊಂಡಿದೆ. ನಿಜವಾದ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಕುಂಭಮೇಳಕ್ಕೆ ಭೇಟಿ ನೀಡುತ್ತಿರುವ ಸಾಮಾನ್ಯ ಜನರಿಗೆ ಯಾವುದೇ ವಿಶೇಷ ಸೌಲಭ್ಯ ಸಿಗುತ್ತಿಲ್ಲ. ಅಲ್ಲದೆ, ಅವರಿಗೆ ಯಾವುದೇ ವ್ಯವಸ್ಥೆ ಇಲ್ಲ’’ ಎಂದು ಅವರು ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

30 ಜನರು ಸಾವನ್ನಪ್ಪಿದ ಹಾಗೂ 60 ಮಂದಿ ಗಾಯಗೊಂಡ ಜನವರಿ 29ರಂದು ನಡೆದ ಕಾಲ್ತುಳಿತದಲ್ಲಿ ಸಂಪೂರ್ಣ ಕಣ್ಣೊರೆಸುವ ಕಾರ್ಯ ನಡೆದಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ಬಚ್ಚನ್ ಪ್ರತಿಪಾದಿಸಿದ್ದಾರೆ.

‘‘ಇದೇ ನೀರು ಅಲ್ಲಿನ ಜನರಿಗೆ ತಲುಪುತ್ತಿದೆ. ಅವರು (ಬಿಜೆಪಿ ಸರಕಾರ) ಇದಕ್ಕೆ ಯಾವುದೇ ರೀತಿಯ ವಿವರಣೆ ನೀಡುತ್ತಿಲ್ಲ. ಸಂಪೂರ್ಣ ಕಣ್ಣೊರೆಸುವ ಕೆಲಸ ನಡೆಯುತ್ತಿದೆ’’ ಎಂದು ಅವರು ಹೇಳಿದ್ದಾರೆ.

‘‘ಅವರು ನೀರು ಹಾಗೂ ಜಲಶಕ್ತಿಯ ಕುರಿತು ಭಾಷಣ ಮಾಡುತ್ತಿದ್ದಾರೆ. ಅಲ್ಲಿಗೆ ಕೋಟ್ಯಂತರ ಜನರು ಭೇಟಿ ನೀಡಿದ್ದಾರೆ ಎಂದು ಅವರು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ನಿರ್ದಿಷ್ಟ ಸಮಯದಲ್ಲಿ ಆ ಸ್ಥಳದಲ್ಲಿ ಅಷ್ಟೊಂದು ಸಂಖ್ಯೆ ಜನರು ಹೇಗೆ ಸೇರುತ್ತಾರೆ?’’ ಎಂದು ಅವರು ಪ್ರಶ್ನಿಸಿದ್ದಾರೆ.

ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಕ್ಷಗಳ ಹಲವು ನಾಯಕರು ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ನೈಜ ಸಂಖ್ಯೆಯನ್ನು ಉತ್ತರಪ್ರದೇಶ ಸರಕಾರ ಮರೆಮಾಚಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆಸುವಂತೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News