ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಕೊಂದಿದ್ದ ಮಾಜಿ ಆರ್‌ಪಿಎಫ್ ಕಾನ್‌ಸ್ಟೇಬಲ್ ವಿರುದ್ಧ ಆರೋಪ ರೂಪಿಸಿದ ಮುಂಬೈ ಕೋರ್ಟ್

Update: 2024-08-08 12:25 GMT

PC : ANI 

ಮುಂಬೈ: ಕಳೆದ ವರ್ಷ ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಟ್ಟು ಕೊಂದಿದ್ದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ವಜಾಗೊಂಡಿರುವ ಕಾನ್‌ಸ್ಟೇಬಲ್ ಚೇತನ್ ಸಿಂಗ್ ಚೌಧರಿ ವಿರುದ್ಧ ಮುಂಬೈನ ಸೆಷನ್ಸ್ ನ್ಯಾಯಾಲಯವು ಬುಧವಾರ ಆರೋಪಗಳನ್ನು ರೂಪಿಸಿದೆ. ನಾಲ್ವರು ವ್ಯಕ್ತಿಗಳ ಕೊಲೆ ಮತ್ತು ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದ ಆರೋಪಗಳನ್ನು ಚೌಧರಿ ವಿರುದ್ಧ ಹೊರಿಸಲಾಗಿದೆ.

2023,ಜು.31ರಂದು ನಸುಕಿನ ಐದು ಗಂಟೆಯ ಸುಮಾರಿಗೆ ಚೌಧರಿ ತನ್ನ ಹಿರಿಯ ಸಹೋದ್ಯೋಗಿ ಆರ್‌ಪಿಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಟಿಕಾರಾಮ ಮೀನಾ ಹಾಗೂ ಪ್ರಯಾಣಿಕರಾದ ಮಹಾರಾಷ್ಟ್ರದ ಪಾಲ್ಘರ್‌ನ ನಾಲಾಸೋಪರ ನಿವಾಸಿ ಅಬ್ದುಲ್ ಕಾದರ್‌ಭಾಯಿ ಮುಹಮ್ಮದ್ ಹುಸೇನ ಭಾನಪುರವಾಲಾ(62),‌ ಬಿಹಾರದ ಮಧುಬನಿ ನಿವಾಸಿ ಅಸ್ಗರ್ ಅಬ್ಬಾಸ್ ಶೇಖ್(48) ಮತ್ತು ಹೈದರಾಬಾದ್ ನಿವಾಸಿ ಸೈಯದ್ ಸೈಫುಲ್ಲಾ (43) ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದ. ಪಾಲ್ಘರ್ ನಿಲ್ದಾಣದ ಬಳಿ ಚಲಿಸುತ್ತಿದ್ದ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಮಾರಣಹೋಮ ನಡೆದಿತ್ತು.

ಅಕೋಲಾ ಜೈಲಿನಲ್ಲಿದ್ದ ಚೌಧರಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಚೌಧರಿ ಗುಂಡು ಹಾರಿಸಲು ತನ್ನ ಸರ್ವಿಸ್ ರೈಫಲ್ ಬಳಸಿದ್ದ ಮತ್ತು ಪ್ರಯಾಣಿಕರು ಎಮರ್ಜರ್ನಿ ಚೈನ್ ಎಳೆದು ರೈಲನ್ನು ನಿಲ್ಲಿಸಿದ ಬಳಿಕ ಮೀರಾ ರೋಡ್ ರೈಲ್ವೆ ನಿಲ್ದಾಣದ ಬಳಿ ಆತನನ್ನು ಬಂಧಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತು.

ನ್ಯಾಯಾಲಯದಲ್ಲಿ ನ್ಯಾ.ಎನ್.ಎಲ್.ಮೋರೆ ಅವರು ಚೌಧರಿಯನ್ನು ಪ್ರಶ್ನಿಸಿದಾಗ ಆರಂಭದಲ್ಲಿ ಆತ ತನ್ನ ತಪ್ಪನ್ನು ಒಪ್ಪಿಕೊಂಡನಾದರೂ ತನ್ನ ವಕೀಲರೊಂದಿಗೆ ಸಮಾಲೋಚಿಸಿದ ಬಳಿಕ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ.

ನ್ಯಾಯಾಲಯವು ಐಪಿಸಿ,ರೈಲ್ವೆ ಕಾಯ್ದೆ ಮತ್ತು ಮಹಾರಾಷ್ಟ್ರ ಆಸ್ತಿ ವಿರೂಪಗೊಳಿಸುವಿಕೆ ತಡೆ ಕಾಯ್ದೆಯಡಿ ಚೌಧರಿ ವಿರುದ್ಧ ಆರೋಪಗಳನ್ನು ರೂಪಿಸಿದೆ.

ಐಪಿಸಿ ಕಲಂ 153-ಎ(ವಿಭಿನ್ನ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ)ಅನ್ನು ಅನ್ವಯಿಸಿದ್ದರ ವಿರುದ್ಧ ವಾದಿಸಿದ ಚೌಧರಿ ಪರ ವಕೀಲರು,ಓರ್ವ ಮಹಿಳೆಯನ್ನು ಹೊರತುಪಡಿಸಿ ಇತರ ಯಾವುದೇ ಸಾಕ್ಷಿಗಳು ತನ್ನ ಕಕ್ಷಿದಾರ ಕೋಮುವಾದಿ ಹೇಳಿಕೆಗಳನ್ನು ನೀಡಿದ್ದ ಎಂದು ತಿಳಿಸಿಲ್ಲ ಎಂದು ಹೇಳಿದರು.

ತನ್ನ ಕಕ್ಷಿದಾರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಮತ್ತು ಆತನಿಗೆ ವಿಶ್ರಾಂತಿಯ ಅಗತ್ಯವಿತ್ತು. ಘಟನೆಯ ದಿನ ಆತನ ಮಿದುಳಿನಲ್ಲಿ ರಕ್ತವೂ ಹೆಪ್ಪುಗಟ್ಟಿದ್ದು,ಆತ ಸೂಕ್ತ ವಿಶ್ರಾಂತಿಯನ್ನು ಪಡೆದಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ಚೌಧರಿ ಪರ ವಕೀಲರು ನ್ಯಾಯಾಲಯಕ್ಕೆ ನಿವೇದಿಸಿಕೊಂಡರು.

ನ್ಯಾಯಾಲಯವು ಆ.20ರಂದು ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News