ಗೋಮಾಂಸ ಸೇವನೆ ಶಂಕಿಸಿ ಹರ್ಯಾಣದಲ್ಲಿ ಮುಸ್ಲಿಂ ಬಂಗಾಳಿ ಯುವಕನ ಹತ್ಯೆ | ಪ್ರಕರಣ ದಾಖಲಿಸಿಕೊಳ್ಳುವಂತೆ ಮಾನವ ಹಕ್ಕುಗಳ ಆಯೋಗಕ್ಕೆ ಟಿಎಂಸಿ ಸಂಸದ ಸಾಕೇತ್ ಗೋಖಲೆ ಪತ್ರ

Update: 2024-09-02 18:44 IST
ಗೋಮಾಂಸ ಸೇವನೆ ಶಂಕಿಸಿ ಹರ್ಯಾಣದಲ್ಲಿ ಮುಸ್ಲಿಂ ಬಂಗಾಳಿ ಯುವಕನ ಹತ್ಯೆ | ಪ್ರಕರಣ ದಾಖಲಿಸಿಕೊಳ್ಳುವಂತೆ ಮಾನವ ಹಕ್ಕುಗಳ ಆಯೋಗಕ್ಕೆ ಟಿಎಂಸಿ ಸಂಸದ ಸಾಕೇತ್ ಗೋಖಲೆ ಪತ್ರ

 ಸಾಕೇತ್ ಗೋಖಲೆ | PC : PTI 

  • whatsapp icon

ಹೊಸದಿಲ್ಲಿ: ಹರ್ಯಾಣದ ಚಾಖ್ರಿ ದಾದ್ರಿಯಲ್ಲಿನ ಬಧ್ರ ಗ್ರಾಮದಲ್ಲಿ ಆ.27ರಂದು ನಡೆದಿರುವ 26 ವರ್ಷದ ಮುಸ್ಲಿಂ ಬಂಗಾಳಿ ಯುವಕನ ಹತ್ಯೆಯ ಕುರಿತು ಪ್ರಕರಣ ದಾಖಲಿಸಿಕೊಳ್ಳುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಟಿಎಂಸಿ ಸಂಸದ ಸಾಕೇತ್ ಗೋಖಲೆ ಪತ್ರ ಬರೆದಿದ್ದಾರೆ.

ತಮ್ಮನ್ನು ತಾವು ಗೋರಕ್ಷಕರು ಎಂದು ಕರೆದುಕೊಳ್ಳುವ ಗುಂಪೊಂದು ಸಾಬಿರ್ ಮಲಿಕ್ ಎಂಬ ಯುವಕನನ್ನು ಬಧ್ರ ಗ್ರಾಮದ ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆಸಿ ಹತ್ಯೆಗೈದಿತ್ತು. ತಮ್ಮ ಈ ಕೃತ್ಯಕ್ಕೆ ʼಆತ ಗೋಮಾಂಸ ಸೇವಿಸಿದ್ದʼ ಎಂಬ ಶಂಕೆ ಕಾರಣ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಹರ್ಯಾಣದಲ್ಲಿ ಗೋರಕ್ಷಕರ ಉಪಟಳ ಹೊಸತೇನಲ್ಲ. ಈ ಹಿಂದೆ ಹಲವಾರು ಬಾರಿ ಆ ರಾಜ್ಯದಲ್ಲಿ ಕ್ರಿಮಿನಲ್ ಗುಂಪುಗಳಿಂದ ಮುಸ್ಲಿಮರ ಮೇಲೆ ಗುಂಪು ಹಲ್ಲೆ ಮತ್ತು ಹತ್ಯೆಗಳು ಈಗಾಗಲೇ ನಡೆದಿವೆ. ಮತ್ತೂ ಆಘಾತಕಾರಿ ಸಂಗತಿಯೆಂದರೆ, ಚಾಖ್ರಿ ದಾದ್ರಿ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹರ್ಯಾಣ ಮುಖ್ಯಮಂತ್ರಿಗಳು, "ಗ್ರಾಮಸ್ಥರು ಗೋವನ್ನು ಪೂಜನೀಯ ಎಂದು ಭಾವಿಸುತ್ತಾರೆ. ಅವರೇನಾದರೂ ಅಹಿತಕರ ಪರಿಸ್ಥಿತಿ ಉದ್ಭವವಾಗಬಹುದು ಎಂದು ಊಹಿಸಿದರೆ, ಅವರನ್ನು ಹೇಗೆ ತಡೆಯಲು ಸಾಧ್ಯ?" ಎಂದು ಹೇಳಿದ್ದಾರೆ ಎಂದು ತಮ್ಮ ಪತ್ರದಲ್ಲಿ ಸಾಕೇತ್ ಗೋಖಲೆ ಗಮನ ಸೆಳೆದಿದ್ದಾರೆ.

ಹರ್ಯಾಣ ಮುಖ್ಯಮಂತ್ರಿಯ ಈ ಹೇಳಿಕೆಯು, ಆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಮುಖ್ಯಸ್ಥರಾದ ಮುಖ್ಯಮಂತ್ರಿಗಳೇ ಈ ಕುರಿತು ಅಸಹಾಯಕತೆ ವ್ಯಕ್ತಪಡಿಸಿ, "ಅವರನ್ನು ತಡೆಯಲು ಯಾರಿಂದ ಸಾಧ್ಯ" ಎಂದು ಗೋರಕ್ಷಕ ಭಯೋತ್ಪಾದಕರ ಬಗ್ಗೆ ಹೇಳುತ್ತಾರೆಂದರೆ, ಇದು ಸಮರ್ಥನೆಗೆ ಸಮವಾದ ಬೆಂಬಲವಾಗಿದೆ. ಒಂದು ವೇಳೆ ಖುದ್ದು ಮುಖ್ಯಮಂತ್ರಿಗಳೇ "ಅವರನ್ನು ಯಾರಿಂದ ತಡೆಯಲು ಸಾಧ್ಯ" ಎಂದು ಅಸಹಾಯಕತೆ ವ್ಯಕ್ತಪಡಿಸಿದರೆ, ಇಂತಹ ಹೀನ ಗುಂಪು ಹಲ್ಲೆ ಹಾಗೂ ಹತ್ಯೆಗಳ ವಿರುದ್ಧ ರಾಜ್ಯ ಪೊಲೀಸರು ಸಕಾರಾತ್ಮಕ ಕ್ರಮ ಕೈಗೊಳ್ಳುತ್ತಾರೆಂದಾಗಲಿ ಅಥವಾ ನಿರೋಧಕ ಕ್ರಮಗಳನ್ನು ಕೈಗೊಳ್ಳುತ್ತಾರೆಂದಾಗಲಿ ನಿರೀಕ್ಷಿಸುವುದು ಅಸಾಧ್ಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆಯ ಸಂತ್ರಸ್ತ ನನ್ನ ರಾಜ್ಯವಾದ ಪಶ್ಚಿಮ ಬಂಗಾಳಕ್ಕೆ ಸೇರಿರುವುದರಿಂದ, ಆ ರಾಜ್ಯವನ್ನು ಸಂಸದನಾಗಿ ಪ್ರತಿನಿಧಿಸುತ್ತಿರುವ ನನ್ನ ಪಾಲಿದೆ ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ಗುಂಪು ಹಲ್ಲೆಗಳನ್ನು ತಡೆಯುವಲ್ಲಿನ ಹರ್ಯಾಣ ಪೊಲೀಸರ ನಿಷ್ಕ್ರಿಯತೆ ಹಾಗೂ ಘಟನೆಯ ಬೆನ್ನಿಗೇ ಮುಖ್ಯಮಂತ್ರಿ ಅಸಹಾಯಕತೆ ವ್ಯಕ್ತಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News