ತರಗತಿಯಲ್ಲಿ ಬಾಲಕನಿಗೆ ಕಪಾಳಮೋಕ್ಷ ಪ್ರಕರಣ: ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ನಡೆಸದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ತರಾಟೆ

Update: 2024-02-10 16:40 IST
ತರಗತಿಯಲ್ಲಿ ಬಾಲಕನಿಗೆ ಕಪಾಳಮೋಕ್ಷ ಪ್ರಕರಣ: ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ನಡೆಸದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ತರಾಟೆ
  • whatsapp icon

ಹೊಸದಿಲ್ಲಿ: ಹೋಂವರ್ಕ್‌ ಮಾಡದೇ ಇರುವುದಕ್ಕೆ ಬಾಲಕನಿಗೆ ಥಳಿಸುವಂತೆ ಶಿಕ್ಷಕಿಯಿಂದ ಸೂಚನೆ ಪಡೆದ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್‌ಗೆ ಒಳಪಡಿಸದೇ ಇರುವುದಕ್ಕೆ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಉತ್ತರ ಪ್ರದೇಶ ಸರ್ಕಾರ ತನ್ನ ಸೂಚನೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಹೇಳಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಅಭಯ್‌ ಎಸ್‌ ಓಕಾ ಮತ್ತು ಉಜ್ಜಲ್‌ ಭುಯಾನ್‌ ಅವರ ಪೀಠ ಈ ಘಟನೆಗೆ ಸಾಕ್ಷಿಯಾಗಿದ್ದ ಮಕ್ಕಳನ್ನು ಕೌನ್ಸೆಲಿಂಗ್‌ಗೆ ಒಳಪಡಿಸುವಂತೆ ಹಾಗೂ ಆದೇಶ ಪಾಲನೆ ಕುರಿತು ಅಫಿಡವಿಟ್‌ ಅನ್ನು ಎರಡು ವಾರಗಳೊಳಗೆ ಸಲ್ಲಿಸುವಂತೆ ಸೂಚಿಸಿದೆ.

“ಈ ಘಟನೆಯಲ್ಲಿ ಭಾಗಿಯಾದ ಹಾಗೂ ಅದಕ್ಕೆ ಸಾಕ್ಷಿಗಳಾದ ಎಲ್ಲಾ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್‌ಗೆ ಒಳಪಡಿಸಬೇಕೆಂಬ ಟಿಐಎಸ್‌ಎಸ್‌ ವರದಿಯನ್ನು ಪರಿಶೀಲಿಸಿದ್ದೇವೆ, ಸರ್ಕಾರ ಏನನ್ನೂ ಮಾಡಿಲ್ಲ. ಇದೀಗ ಬಹಳ ತಡವಾಗಿ ಬಿಟ್ಟಿದೆ. ಪ್ರಮುಖವಾಗಿ ಘಟನೆಗೆ ಸಾಕ್ಷಿಯಾದ ವಿದ್ಯಾರ್ಥಿಗಳನ್ನು ತಕ್ಷಣ ಸಮಾಲೋಚನೆಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಪೀಠ ಹೇಳಿದೆ ಹಾಗೂ ಮುಂದಿನ ವಿಚಾರಣೆಯನ್ನು ಮಾರ್ಚ್‌ ತಿಂಗಳಿಗೆ ನಿಗದಿಪಡಿಸಿದೆ.

ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ನಡೆಸಲು ಎರಡು ಸಂಸ್ಥೆಗಳು ಮುಂದೆ ಬಂದಿವೆ ಎಂದು ಹೇಳಿದ ಉತ್ತರ ಪ್ರದೇಶದ ಹೆಚ್ಚುವರಿ ಅಡ್ವಕೇಟ್‌ ಜನರಲ್‌ ಗರಿಮಾ ಪ್ರಸಾದ್‌, ಅಫಿಡವಿಟ್‌ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ಕೋರಿದರು.

ವಿದ್ಯಾರ್ಥಿ ಹೋಂವರ್ಕ್‌ ಮಾಡಿಲ್ಲವೆಂದು ಆತನಿಗೆ ಕಪಾಳಮೋಕ್ಷಗೈಯ್ಯುವಂತೆ ಶಿಕ್ಷಕಿ ಇತರ ವಿದ್ಯಾರ್ಥಿಗಳಿಗೆ ಸೂಚಿಸಿದ್ದರಲ್ಲದೆ ಸಂತ್ರಸ್ತ ಬಾಲಕನ ಸಮುದಾಯವನ್ನು ಉಲ್ಲೇಖಿಸಿ ಆತನನ್ನು ನಿಂದಿಸಿದ್ದರೆಂದು ಆರೋಪಿಸಲಾಗಿತ್ತು.

ಈ ಪ್ರಕರಣದ ಸಂತ್ರಸ್ತ ವಿದ್ಯಾರ್ಥಿ ಮತ್ತಾತನ ಸಹಪಾಠಿಗಳ ಕೌನ್ಸೆಲಿಂಗ್‌ ಹೇಗೆ ನಡೆಸಬೇಕೆಂಬ ಕುರಿತು ತಿಳಿಸಲು ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸಾಯನ್ಸಸ್‌ ಅನ್ನು ಸುಪ್ರೀಂ ಕೋರ್ಟ್‌ ನಿಯೋಜಿಸಿತ್ತು.

ಶಿಕ್ಷಕಿಯ ವಿರುದ್ಧ ಮುಝಫ್ಫರನಗರ ಪೊಲೀಸರು ಪ್ರಕರಣ ದಾಖಲಿಸಿದ್ದರೆ ಪೊಲೀಸ್‌ ಇಲಾಖೆ ಶಾಲೆಗೆ ನೋಟಿಸ್‌ ಕೂಡ ಜಾರಿಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News