ರಾಹುಲ್ ಗಾಂಧಿ ರೋಡ್ ಶೋ ವೇಳೆ ಕಾಣಿಸದ ಮುಸ್ಲಿಂ ಲೀಗ್ ಧ್ವಜ: ಕಾಂಗ್ರೆಸ್ ಬಿಜೆಪಿಗೆ ಹೆದರಿದೆ ಎಂದ ಪಿಣರಾಯಿ ವಿಜಯನ್
ತಿರುವನಂತಪುರಂ: ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಚುನಾವಣಾ ಪ್ರಚಾರಕ್ಕೆ ರೋಡ್ ಶೋ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದ್ದ ಬೆನ್ನಿಗೇ, ಈ ರೋಡ್ ಶೋ ವೇಳೆ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಹೆದರಿಕೊಂಡು ತನ್ನ ಹಾಗೂ ತನ್ನ ಮೈತ್ರಿ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಧ್ವಜಗಳನ್ನು ಪ್ರದರ್ಶಿಸಲಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಮತಗಳು ಬೇಕು, ಆದರೆ ಅದರ ಧ್ವಜ ಬೇಡ ಎಂಬುದನ್ನು ಸೂಚಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಕೋಮುವಾದಿ ಶಕ್ತಿಗಳಿಗೆ ಹೆದರುವ ಹಂತಕ್ಕೆ ಕಾಂಗ್ರೆಸ್ ಕುಸಿದಿದೆ ಎಂದೂ ಅವರು ಆರೋಪಿಸಿದ್ದಾರೆ.
ಬುಧವಾರ ನಡೆದ ರಾಹುಲ್ ಗಾಂಧಿ ಅವರ ರೋಡ್ ಶೋ 2019ರ ಲೋಕಸಭಾ ಚುನಾವಣಾ ಪ್ರಚಾರಕ್ಕಿಂತಲೂ ವಿಭಿನ್ನವಾಗಿತ್ತು. ಆ ಬಾರಿಯ ಪ್ರಚಾರದಲ್ಲಿ ಭಾಗವಹಿಸಿದ್ದ ಜನಸ್ತೋಮದ ನಡುವೆ ಕಾಂಗ್ರೆಸ್ ಧ್ವಜಕ್ಕಿಂತ ಐಯುಎಂಎಲ್ ಧ್ವಜಗಳೇ ದೊಡ್ಡ ಸಂಖ್ಯೆಯಲ್ಲಿದ್ದವು.
2019ರ ಚುನಾವಣೆಯ ಸಂದರ್ಭದಲ್ಲಿ ಐಯುಎಂಎಲ್ ಧ್ವಜಗಳ ಕುರಿತು ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದಕೊಂಡಿದ್ದುದರಿಂದ ಈ ಬಾರಿಯ ರೋಡ್ ಶೋನಲ್ಲಿ ಅವು ಕಾಣೆಯಾಗಿವೆ ಎಂದು ಪಿಣರಾಯಿ ವಿಜಯನ್ ಅಭಿಪ್ರಾಯ ಪಟ್ಟಿದ್ದಾರೆ.