ಬಿಜೆಪಿ ಅಧ್ಯಕ್ಷರಾಗಿ ನಡ್ಡಾ 3ರಿಂದ 6 ತಿಂಗಳು ಮುಂದುವರಿಯುವ ಸಾಧ್ಯತೆ
ಹೊಸದಿಲ್ಲಿ : ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾರಾವಧಿ ಎರಡನೇ ಬಾರಿಗೆ ವಿಸ್ತರಣೆಗೊಳ್ಳುವ ಸಾಧ್ಯತೆಯಿದೆ. ಇನ್ನೂ ಮೂರರಿಂದ ಆರು ತಿಂಗಳುಗಳವರೆಗೆ ಅವರು ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಪಕ್ಷದ ಮೂಲಗಳು ತಿಳಿಸಿದವು.
ಪಕ್ಷಕ್ಕೆ ಕಾರ್ಯಾಧ್ಯಕ್ಷರನ್ನು ನೇಮಿಸುವುದು ಒಂದು ಸಾಧ್ಯತೆಯಾಗಿದೆ ಎಂದು ಈ ಮೂಲಗಳು ಹೇಳಿದವು.
ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳು ನವೆಂಬರ್ನಲ್ಲಿ ಮುಗಿಯುವವರೆಗೂ ನಾಯಕತ್ವದ ಮುಂದುವರಿಕೆಯನ್ನು ಖಚಿತಪಡಿಸುವುದು ನಡ್ಡಾರ ಅಧಿಕಾರಾವಧಿ ವಿಸ್ತರಣೆಯ ಉದ್ದೇಶವಾಗಿದೆ ಎಂದು ಪಕ್ಷದ ನಾಯಕರೋರ್ವರು ತಿಳಿಸಿದರು.
ನಡ್ಡಾ ಅಧಿಕಾರಾವಧಿಯ ವಿಸ್ತರಣೆಯು ಎರಡು ಅಂಶಗಳನ್ನು ಆಧರಿಸಿದೆ. ಮೊದಲನೆಯದಾಗಿ ರಾಜ್ಯ ಚುನಾವಣೆಗಳು ಸನ್ನಿಹಿತವಾಗಿದ್ದು,ನಡ್ಡಾರ ಮಾರ್ಗದರ್ಶನದಲ್ಲಿ ಸ್ಥಿರತೆ ಮತ್ತು ಒಗ್ಗಟ್ಟನ್ನು ಕಾಯ್ದುಕೊಳ್ಳಲು ಪಕ್ಷದ ನಾಯಕತ್ವವು ಬಯಸಿದೆ. ಎರಡನೆಯದಾಗಿ ಹಾಲಿ ನಡೆಯುತ್ತಿರುವ ಬಿಜೆಪಿಯ ಸಾಂಸ್ಥಿಕ ಚುನಾವಣೆಗಳು ವಿವಿಧ ರಾಜ್ಯಗಳಲ್ಲಿ ಅಪೂರ್ಣವಾಗಿವೆ ಎಂದು ಅವರು ಹೇಳಿದರು.
2020ರಲ್ಲಿ ಅಮಿತ್ ಶಾ ಅವರ ಉತ್ತರಾಧಿಕಾರಿಯಾಗಿ ಬಿಜೆಪಿ ಅಧ್ಯಕ್ಷ ಗಾದಿಗೇರಿದ್ದ ನಡ್ಡಾ ಅವರ ಮೂರು ವರ್ಷಗಳ ಅಧಿಕಾರಾವಧಿ 2024 ಜನವರಿಯಲ್ಲಿ ಅಂತ್ಯಗೊಂಡ ಬಳಿಕ ಅದನ್ನು ಜೂ.30ರವರೆಗೆ ವಿಸ್ತರಿಸಲಾಗಿತ್ತು.