ಗೋಹತ್ಯೆ ನಿಷೇಧ ಪ್ರಚಾರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ನಾಗಾಲ್ಯಾಂಡ್ ಸರಕಾರ
ಕೊಹಿಮಾ: ನಾಗಾಲ್ಯಾಂಡ್ ಸಂಪುಟವು ಬುಧವಾರ ಕೊಹಿಮಾದಲ್ಲಿ ಉದ್ದೇಶಿತ ಗೋ ಧ್ವಜ ಸ್ಥಾಪನಾ ಭಾರತ ಯಾತ್ರಾಕ್ಕೆ ಅನುಮತಿಯನ್ನು ನಿರಾಕರಿಸಿದೆ. ಈ ಕಾರ್ಯಕ್ರಮವು ದೇಶವ್ಯಾಪಿ ಗೋಹತ್ಯೆ ನಿಷೇಧವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಸಂವಿಧಾನದ 371-ಎ ವಿಧಿಯಡಿ ನಾಗಾಗಳ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು,ಅವರ ಸಾಂಪ್ರದಾಯಿಕ ಕಾನೂನುಗಳು ಮತ್ತು ಪದ್ಧತಿಗಳಿಗೆ ನೀಡಿರುವ ರಕ್ಷಣೆಯನ್ನು ಸಂಪುಟವು ಉಲ್ಲೇಖಿಸಿದೆ ಎಂದು ಬಿಜೆಪಿ ನಾಯಕ ಹಾಗೂ ರಾಜ್ಯದ ಸಚಿವ ತೆಮ್ಜೆನ್ ಇಮ್ನಾ ಅಲಂಗ್ ಅವರು ತಿಳಿಸಿದರು.
ಯಾತ್ರೆಗೆ ವಿವಿಧ ಸಾಮಾಜಿಕ ಸಂಘಟನೆಗಳು,ರಾಜಕೀಯ ಪಕ್ಷಗಳು ಇತ್ಯಾದಿಗಳಿಂದ ವಿರೋಧನ್ನು ಪರಿಶೀಲಿಸಿದ ಸಂಪುಟವು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಹಿತಾಸಕ್ತಿಯಲ್ಲಿ ಉದ್ದೇಶಿತ ಯಾತ್ರೆಗೆ ಅನುಮತಿ ನೀಡದಿರಲು ನಿರ್ಧರಿಸಿದೆ ಎಂದೂ ಅವರು ಹೇಳಿದರು.
ಯಾತ್ರೆಯ ಅಂಗವಾಗಿ ಉತ್ತರಾಖಂಡದ ಜ್ಯೋತಿಷ್ ಪೀಠದ ಶಂಕರಾಚಾರ್ಯರು ಗೋ ರಕ್ಷಣೆಯನ್ನು ಸಂಕೇತಿಸುವ ಗೋ ಧ್ವಜವನ್ನು ಸ್ಥಾಪಿಸಲು ವಿವಿಧ ರಾಜ್ಯಗಳ ರಾಜಧಾನಿಗಳಿಗೆ ಭೇಟಿ ನೀಡಲಿದ್ದಾರೆ.
ಸೆ.22ರಿಂದ ಅ.26ರವರೆಗೆ ದೇಶವ್ಯಾಪಿ ಯಾತ್ರೆಯನ್ನು ನಡೆಸಲು ಯೋಜಿಸಲಾಗಿದೆ. ಕೊಹಿಮಾದಲ್ಲಿ ಸೆ.28ರಂದು ಯಾತ್ರೆಯು ನಡೆಯಲಿತ್ತು.
ಕಾರ್ಯಕ್ರಮಕ್ಕೆ ವಿರೋಧಗಳ ನಡುವೆ ಬಿಜೆಪಿಯು ಯಾತ್ರೆಯ ಆಯೋಜಕರು ತನ್ನ ರಾಜ್ಯ ಘಟಕದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಬಿಜೆಪಿ ಎನ್‌ಡಿಪಿಪಿ ನೇತೃತ್ವದ ನಾಗಾಲ್ಯಾಂಡ್ ಸರಕಾರದ ಭಾಗವಾಗಿದೆ. ನಾಗಾಲ್ಯಾಂಡ್ ವಿಧಾನಸಭೆಯು ಸಂವಿಧಾನದ ನಿಬಂಧನೆಯ ಆಧಾರದಲ್ಲಿ 2019ರ ಗೋಹತ್ಯೆ ನಿಷೇಧ ಕಾನೂನನ್ನು ಅನುಷ್ಠಾನಿಸಿಲ್ಲ ಎಂದು ಸೋಮವಾರ ಎತ್ತಿ ತೋರಿಸಿದ್ದ ಎನ್‌ಡಿಪಿಪಿ,ಇಂದು ನಾಗಾಲ್ಯಾಂಡ್ ವಿಧಾನಸಭೆ ಮತ್ತು ಸರಕಾರದ ನಿರ್ಧಾರವು ಅಸ್ತಿತ್ವದಲ್ಲಿರುವಾಗ ಗೋಹತ್ಯೆ ನಿಷೇಧದ ಪ್ರಚಾರಕ್ಕಾಗಿ ಆಯೋಜಿಸಲಾದ ಕಾರ್ಯಕ್ರಮವು ನಾಗಾ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಬಹುದು ಮತ್ತು ರಾಜ್ಯದಲ್ಲಿಯ ಸಾಮಾಜಿಕ-ಧಾರ್ಮಿಕ ಸಾಮರಸ್ಯವನ್ನೂ ಹದಗೆಡಿಸಬಹುದು ಎಂದು ಹೇಳಿತ್ತು. ನಾಗಾಲ್ಯಾಂಡ್‌ನಲ್ಲಿ ಕಾರ್ಯಕ್ರಮದ ಆಯೋಜನೆಯನ್ನು ಪುನರ್‌ಪರಿಶೀಲಿಸುವಂತೆ ಅದು ಆಯೋಜಕರನ್ನು ಆಗ್ರಹಿಸಿತ್ತು.