ಬೋನಸ್ ನೀಡದ್ದಕ್ಕೆ ಡಾಬಾ ಮಾಲಕನನ್ನು ಹತ್ಯೆ!
ಹೊಸದಿಲ್ಲಿ: ದೀಪಾವಳಿಯ ಬೋನಸ್ ನೀಡಲು ನಿರಾಕರಿಸಿದ ಡಾಬಾ ಮಾಲಕನನ್ನು, ಇಬ್ಬರು ಕೆಲಸಗಾರರು ಥಳಿಸಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ಶನಿವಾರ ನಡೆದಿದೆ. ಹತ್ಯೆಯಾದ ಡಾಬಾ ಮಾಲಕನನ್ನು ರಾಜು ಧೆಂಗ್ರೆ ಎಂದು ಗುರುತಿಸಲಾಗಿದೆ.
ನಾಗಪುರದ ಗ್ರಾಮಾಂತರ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಕುಹಿ ಪಾಟಾ ಸಮೀಪದ ಡಾಬಾವನ್ನು ನಡೆಸುತ್ತಿದ್ದ ರಾಜು ಧೇಂಗ್ರೆಗೆ ದೀಪಾವಳಿ ಬೋನಸ್ ನೀಡುವಂತೆ ಆತನ ಇಬ್ಬರು ಕೆಲಸಗಾರರಾದ ಛೋಟು ಹಾಗೂ ಆದಿ ಒತ್ತಾಯಿಸಿದ್ದರು. ಆದರೆ ಆತ ನಿರಾಕರಿಸಿದ್ದ. ಇದರಿಂದ ಆಕ್ರೋಶಗೊಂಡ ಛೋಟು ಹಾಗೂ ಆದಿ, ಮಾಲಕ ರಾಜುವನ್ನು ಹಿಗ್ಗಾಮಗ್ಗಾ ಥಳಿಸಿ, ಆನಂತರ ಆತನ ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಶನಿವಾರ ರಾತ್ರಿ ಧೇಂಗ್ರೆ ಜೊತೆ ಊಟ ಮಾಡುತ್ತಿದ್ದಾಗ, ಆರೋಪಿಗಳಿಬ್ಬರೂ ತಮಗೆ ದೀಪಾವಳಿ ಬೋನಸ್ ಹಾಗೂ ಹಣ ನೀಡಬೇಕೆಂದು ಒತ್ತಾಯಿಸಿದ್ದರು. ಅದಕ್ಕೆ ಒಪ್ಪದ ದೇಂಗ್ರೆ ತಾನು ಬೋನಸ್ ಅನ್ನು ಮುಂದೆ ಯಾವತ್ತಾದರೂ ನೀಡುವೆ ಎಂಬುದಾಗಿ ಹೇಳಿದ್ದರೆನ್ನಲಾಗಿದೆ.
ರಾತ್ರಿ ಊಟವಾದ ಆನಂತರ ಧೇಂಗ್ರೆ ಮಂಚದಲ್ಲಿ ಮಲಗಿದ್ದಾಗ, ಆದಿ ಹಾಗೂ ಚೋಟು, ಆತನ ಕತ್ತಿಗೆ ಹಗ್ಗ ಬಿಗಿದಿದ್ದು, ಆನಂತರ ಭಾರವಾದ ವಸ್ತುವಿನಿಂದ ಆತ ತಲೆಯನ್ನು ಜಜ್ಜಿದ್ದರು ಹಾಗೂ ಹರಿತವಾದ ಆಯುಧದಿಂದ ಆತನ ಮುಖವನ್ನು ಸೀಳಿಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ
ಮೃತ ಧೇಂಗ್ರೆ ಸುರ್ಗಾಂವ್ ಗ್ರಾಮದ ಸರಪಂಚನಾಗಿದ್ದು ಆತನ ಇತ್ತೀಚೆಗೆ ನಡೆದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ್ದನು.
ಮೇಲ್ನೋಟಕ್ಕೆ ಇದೊಂದು ಹಣಕಾಸಿನ ವಿಚಾರದಲ್ಲಿ ನಡೆದ ಕೊಲೆಯೆಂದು ಕಂಡುಬರುತ್ತಿದೆಯಾದರೂ, ರಾಜಕೀಯ ದ್ವೇಷ ಕಾರಣವಾಗಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಹರ್ಷ ಎ. ಪೊದ್ದಾರ್ ತಿಳಿಸಿದ್ದಾರೆ.
ಕೊಲೆಯ ಬಳಿಕ ಧೇಂಗ್ರೆಯ ಶವವನ್ನು ಕಂಬಳಿಯಲ್ಲಿ ಸುತ್ತಿಟ್ಟಿದ್ದರು. ಆನಂತರ ಆರೋಪಿಗಳು ಆತನ ಕಾರಿನಲ್ಲಿ ಪರಾರಿಯಾಗಿದ್ದರು. ಆದರೆ ಕಾರನ್ನು ಆರೋಪಿಗಳು ವಿಹಾರ್ಗಾಂವ್ ಸಮೀಪದ ನಾಗಪುರ -ಉಮರೇದ್ ರಸ್ತೆಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆಸಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆನಂತರ ಆರೋಪಿಗಳು ಕಾರಿನಿಂದ ಹೊರಗೆ ಬಂದು, ಪಂಚಗಾಂವ್ ನಿಂದ ನಾಗಪುರಕ್ಕೆ, ಅಲ್ಲಿಂದ ದಿಘೋರಿ ನಾಕಾಕ್ಕೆ ಪ್ರಯಾಣಿಸುತ್ತಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮರಾಗಳಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.