"ದೇಶಾದ್ಯಂತ ಸರಕಾರಿ ಆಸ್ಪತ್ರೆಗೆ ಟಾಲ್ಕಮ್ ಪೌಡರ್, ಹಿಟ್ಟುಗಳನ್ನು ಬಳಸಿದ ಆ್ಯಂಟಿಬಯೋಟಿಕ್ಸ್ ಪೂರೈಕೆ": ನಾಗ್ಪುರ ನಕಲಿ ಡ್ರಗ್ಸ್ ಪ್ರಕರಣದ ಆಘಾತಕಾರಿ ಮಾಹಿತಿ ಬಹಿರಂಗ
ನಾಗಪುರ: ನಾಗ್ಪುರ ನಕಲಿ ಡ್ರಗ್ಸ್ ಸರಬರಾಜು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 1,200 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ಔಷಧಿಗಳ ತಯಾರಿಕೆಗೆ ಟಾಲ್ಕಮ್ ಪೌಡರ್ ಮತ್ತು ಜೋಳದ ಹಿಟ್ಟು ಬಳಸಿರುವುದು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದು Times of India ವರದಿ ಮಾಡಿದೆ.
ಸೆಪ್ಟೆಂಬರ್ 20 ರಂದು ನಾಗ್ಪುರ ಗ್ರಾಮಾಂತರ ಪೊಲೀಸರು ಈ ಕುರಿತು ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಆಘಾತಕಾರಿ ಸಂಗತಿಗಳನ್ನು ಉಲ್ಲೇಖಿಸಲಾಗಿತ್ತು.
ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಲಾದ ಆ್ಯಂಟಿಬಯೋಟಿಕ್ಗಳು ಹರಿದ್ವಾರ ಮೂಲದ ಪಶುವೈದ್ಯಕೀಯ ಔಷಧಿಗಳ ಪ್ರಯೋಗಾಲಯದಲ್ಲಿ ತಯಾರಿಸಲಾಗಿದೆ. ಅದರಲ್ಲಿ ಜೋಳದ ಹಿಟ್ಟು ಮತ್ತು ಟಲ್ಕಮ್ ಪೌಡರ್ ಅನ್ನು ಬೆರೆಸಲಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ನಕಲಿ ಔಷಧಗಳ ಪೂರೈಕೆಯ ಜೊತೆಗೆ, ವಂಚಕರು ಮುಂಬೈನಿಂದ ಉತ್ತರ ಪ್ರದೇಶದ ಸಹರಾನ್ಪುರಕ್ಕೆ ಕೋಟ್ಯಂತರ ರೂ.ಗಳನ್ನು ವರ್ಗಾಯಿಸಲು ಹವಾಲಾ ಹಣ ಬಳಸಿದ್ದಾರೆ.
ಉತ್ತರಪ್ರದೇಶ, ಜಾರ್ಖಂಡ್, ಛತ್ತೀಸ್ಗಢ ಮತ್ತು ಮಹಾರಾಷ್ಟ್ರದ ಆಸ್ಪತ್ರೆಗಳು ಸೇರಿದಂತೆ ಭಾರತದಾದ್ಯಂತ ಸರಬರಾಜು ಮಾಡಿದ ನಕಲಿ ಔಷಧಿಗಳಿಗೆ ಈ ಹಣವನ್ನು ಬಳಸಲಾಗಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಡ್ರಗ್ ಇನ್ಸ್ಪೆಕ್ಟರ್ ನಿತಿನ್ ಭಂಡಾರ್ಕರ್ ಅವರು ಕಲ್ಮೇಶ್ವರದ ಗ್ರಾಮಾಂತರ ಆಸ್ಪತ್ರೆಗೆ ಸರಬರಾಜು ಮಾಡಿದ ಆ್ಯಂಟಿಬಯೋಟಿಕ್ ಗಳು ನಕಲಿ ಎಂದು ಪತ್ತೆಹಚ್ಚಿದ ನಂತರ ಆಘಾತಕಾರಿ ಪ್ರಕರಣವು ಬೆಳಕಿಗೆ ಬಂದಿತ್ತು.
ಎಫ್ಡಿಎ ಈ ಬಗ್ಗೆ ಕಳೆದ ವರ್ಷ ಕಲ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಮೆಡಿಸಿನ್ ಪೂರೈಕೆದಾರರು ಮತ್ತು ವಿತರಕರ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು. ಇಂತಹ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಕೂಡ ಸೇರಿಸಿತ್ತು.