ಜಾರ್ಖಂಡ್ ನಲ್ಲಿ “ನುಸುಳುಕೋರ”ರನ್ನು ಗುರುತಿಸಿ ಹೊರದಬ್ಬಲು ಸಮಿತಿ : ಅಮಿತ್ ಶಾ
ರಾಂಚಿ : ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿರುವ ʼನುಸುಳುಕೋರʼ ರನ್ನು ಗುರುತಿಸಿ ಹೊರದಬ್ಬಲು ಅದು ಸಮಿತಿಯೊಂದನ್ನು ರಚಿಸುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಸೆರೈಕೇಳದಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “ನುಸುಳುಕೋರರು” ಬುಡಕಟ್ಟು ಮಹಿಳೆಯರನ್ನು ಮದುವೆಯಾದ ಬಳಿಕ ಆ ಮಹಿಳೆಯರ ಜಮೀನು ಅವರಿಗೆ ಹಸ್ತಾಂತರವಾಗುವುದನ್ನು ತಡೆಯಲು ಬಿಜೆಪಿ ಸರಕಾರವು ಕಾನೂನೊಂದನ್ನು ರೂಪಿಸುವುದು ಎಂದು ಘೋಷಿಸಿದರು.
ಜಮೀನು ವಶಪಡಿಸಿಕೊಳ್ಳುವುದಕ್ಕಾಗಿ “ನುಸುಳುಕೋರರು” ಬುಡಕಟ್ಟು ಮಹಿಳೆಯರನ್ನು ಮದುವೆಯಾಗುತ್ತಾರೆ ಎಂಬ ಬಿಜೆಪಿಯ ಆರೋಪವನ್ನು ಅವರು ಪುನರುಚ್ಚರಿಸಿದರು.
ಈಗಾಗಲೇ ಗುಳುಂ ಮಾಡಲಾಗಿರುವ ಜಮೀನನ್ನು ಜಾರ್ಖಂಡ್ ನ ಬುಡಕಟ್ಟು ಜನರಿಗೆ ಮರಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
“ಜಾರ್ಖಂಡ್ ನಲ್ಲಿ ಬುಡಕಟ್ಟು ಜನಸಂಖ್ಯೆ ಕುಸಿಯುತ್ತಿದೆ. ನಮ್ಮ ಪುತ್ರಿಯರನ್ನು ಮದುವೆಯಾಗುವ ಮೂಲಕ ನುಸುಳುಕೋರರು ಜಮೀನು ಆಕ್ರಮಿಸಿಕೊಳ್ಳುತ್ತಿದ್ದಾರೆ. ನುಸುಳುಕೋರರು ಬುಡಕಟ್ಟು ಮಹಿಳೆಯರನ್ನು ಮದುವೆಯಾದರೂ ಜಮೀನು ಅವರಿಗೆ ಹಸ್ತಾಂತರವಾಗುವುದನ್ನು ತಡೆಯಲು ನಾವು ಕಾನೂನು ತರುತ್ತೇವೆ. ನುಸುಳುಕೋರರನ್ನು ಗುರುತಿಸಿ ಹೊರದಬ್ಬಲು ಮತ್ತು ಅವರು ಆಕ್ರಮಿಸಿಕೊಂಡಿರುವ ಜಮೀನುಗಳನ್ನು ಮರುವಶಪಡಿಸಿಕೊಳ್ಳಲು ಸಮಿತಿಯೊಂದನ್ನು ರಚಿಸುತ್ತೇವೆ” ಎಂದು ಅವರು ಹೇಳಿದರು.