ಮಣಿಪುರದಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ 10 ಕುಕಿ ಬಂಡುಕೋರರ ಹತ್ಯೆ
ಮಣಿಪುರ : ಜಿರಿಬಾಮ್ನಲ್ಲಿ ಸೋಮವಾರ CRPF ಶಿಬಿರದ ಮೇಲೆ ದಾಳಿ ನಡೆಸಿದ ಕುಕಿ ಬಂಡುಕೋರರ ಮೇಲೆ ಸೇನೆ ಪ್ರತಿದಾಳಿ ನಡೆಸಿದ್ದು, ಈ ವೇಳೆ ಕನಿಷ್ಠ 10 ಕುಕಿ ಬಂಡುಕೋರರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ CRPF ಶಿಬಿರದ ಮೇಲೆ ಬಂಡುಕೋರರು ದಾಳಿ ನಡೆಸಿದ್ದು, ಈ ವೇಳೆ CRPF ಪ್ರತಿದಾಳಿ ನಡೆಸಿದೆ. ಇದಲ್ಲದೆ ಬಂಡುಕೋರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಓರ್ವ CRPF ಯೋಧ ತೀವ್ರವಾಗಿ ಗಾಯಗೊಂಡಿದ್ದು, ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮುಂಜಾನೆ ಕುಕಿ ಬಂಡುಕೋರರು ಬೊರೊಬೆಕ್ರಾ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು, ಪೊಲೀಸರು ಪ್ರತಿ ದಾಳಿಯನ್ನು ನಡೆಸಿದ್ದರು.
ಇದಲ್ಲದೆ ಶಸ್ತ್ರಸಜ್ಜಿತ ಬಂಡುಕೋರರು ಜಕುರಾಧೋರ್ನಲ್ಲಿ ಮೈಥೇಯಿ ಸಮುದಾಯಕ್ಕೆ ಸೇರಿದ ಮೂರ್ನಾಲ್ಕು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ರವಿವಾರ ಇಂಫಾಲ್ ಪೂರ್ವ ಜಿಲ್ಲೆಯ ಸನಾಸಾಬಿ ಗದ್ದೆಯಲ್ಲಿ ಬಂಡುಕೋರರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಯೋಧರೋರ್ವರು ಗಾಯಗೊಂಡಿದ್ದರು.