ಅಕ್ರಮ ಹಣ ವರ್ಗಾವಣೆ ಪ್ರಕರಣ | ಕ್ಯಾನ್ಸರ್ ಚಿಕಿತ್ಸೆಗಾಗಿ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಗೆ ಜಾಮೀನು
ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಗೆ ಬಾಂಬೆ ಹೈಕೋರ್ಟ್ ಸೋಮವಾರ ಕ್ಯಾನ್ಸರ್ ಚಿಕಿತ್ಸೆಗಾಗಿ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಎನ್ ಜೆ ಜಮಾದಾರ್ ಅವರ ಏಕ ಸದಸ್ಯ ಪೀಠವು ಮೇ 6ರಂದು ಎರಡು ತಿಂಗಳ ಕಾಲ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಲು ಗೋಯಲ್ ಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಿತ್ತು. ಆ ಬಳಿಕ ಜಾಮೀನನ್ನು ನಾಲ್ಕು ವಾರಗಳವರೆಗೆ ಮತ್ತು ನಂತರ ಮತ್ತೆ ಎರಡು ತಿಂಗಳವರೆಗೆ ವಿಸ್ತರಿಸಲಾಗಿತ್ತು. ಸೋಮವಾರ ಈ ಮಧ್ಯಂತರ ಆದೇಶವನ್ನು ಖಾಯಂಗೊಳಿಸಲಾಗಿದೆ.
ಗೋಯಲ್(75) ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಜಾಮೀನು ಕೋರಿದ್ದರು. ಜಾರಿ ನಿರ್ದೇಶನಾಲಯ(ಈಡಿ) ಅವರ ಮನವಿಯನ್ನು ವಿರೋಧಿಸಿತ್ತು. ಕಸ್ಟಡಿಯಲ್ಲಿರುವಾಗ ಅವರು ಹೇಳಿದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಬಹುದು ಎಂದು ವಾದಿಸಿತ್ತು.
ಕೆನರಾ ಬ್ಯಾಂಕ್ ನಿಂದ ಜೆಟ್ ಏರ್ ವೇಸ್ ಪಡೆದ 538.62 ಕೋಟಿ ರೂ.ಗಳ ಸಾಲವನ್ನು ಮರುಪಾವತಿ ಮಾಡದೆ ವಂಚಿಸಲಾಗಿದೆ ಎಂಬ ಆರೋಪಿದಲ್ಲಿ ಜಾರಿ ನಿರ್ದೇಶನಾಲಯ ಸೆಪ್ಟೆಂಬರ್ 2023ರಲ್ಲಿ ಗೋಯಲ್ ಅವರನ್ನು ಬಂಧಿಸಿತ್ತು.