ನರಸಿಂಹ ರಾವ್ ‘ಬಿಜೆಪಿಯ ಪ್ರಥಮ ಪ್ರಧಾನಿ’: ಭಾರೀ ಚರ್ಚೆಗೆ ಗ್ರಾಸವಾದ ಕಾಂಗ್ರೆಸ್ ನಾಯಕ ಮಣಿಶಂಕರ್ ಹೇಳಿಕೆ

Update: 2023-08-24 15:13 GMT

ಕಾಂಗ್ರೆಸ್ ನಾಯಕ ಮಣಿಶಂಕರ್

ಹೊಸದಿಲ್ಲಿ: ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ಕೋಮುವಾದಿಯಾಗಿದ್ದರು ಎಂದು ಬುಧವಾರ ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಆಯ್ಯರ್, ಅವರು ದೇಶದ ಪ್ರಥಮ ಬಿಜೆಪಿ ಪ್ರಧಾನಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.

ಮಾಜಿ ರಾಯಭಾರಿಯೂ ಆಗಿರುವ ಮಣಿಶಂಕರ್ ಅಯ್ಯರ್ ಅವರ “ಮೆಮೋರೀಸ್ ಆಫ್ ಎ ಮೇವರಿಕ್ – ದಿ ಫಸ್ಟ್ ಫಿಫ್ಟಿ ಇಯರ್ಸ್ (1941-1991)” ನೂತನ ಕೃತಿಯು ಸೋಮವಾರ ಬಿಡುಗಡೆಯಾಗಿದ್ದು, ಪಾಕಿಸ್ತಾನದೊಂದಿಗೆ ಉಭಯ ಮಾತುಕತೆಯನ್ನು ಪುನಾರಂಭಿಸಬೇಕು ಎಂದೂ ಈ ಕೃತಿಯಲ್ಲಿ ಸಲಹೆ ನೀಡಲಾಗಿದೆ. “ಆ ದೇಶದ ವಿಚಾರಕ್ಕೆ ಬಂದಾಗ ನಮಗೆ ಅದರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಗಳನ್ನು ಮಾಡುವ ಧೈರ್ಯವಿದೆ. ಆದರೆ, ಮೇಜಿನ ಸುತ್ತ ಕುಳಿತು ಪಾಕಿಸ್ತಾನಿಯೊಬ್ಬನೊಂದಿಗೆ ಮಾತುಕತೆ ನಡೆಸುವ ಕೆಚ್ಚಿಲ್ಲ” ಎಂದು ಆ ಕೃತಿಯಲ್ಲಿ ಹೇಳಿದ್ದಾರೆ.

“ನನ್ನ ಪ್ರಕಾರ, ಪ್ರಧಾನ ಮಂತ್ರಿಗಳ ಕಾರ್ಯಾಲಯವನ್ನು ತಾವು ಆಗಮಿಸುತ್ತಿದ್ದಂತೆಯೇ ರಾಜಕೀಕರಣಗೊಳಿಸಿದ ಅಪಾಯಕಾರಿ ಆರ್.ಕೆ.ಧವನ್ ಅವರನ್ನು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ನೇಮಿಸಿದ್ದು ರಾಜೀವ್ ಗಾಂಧಿ ಮಾಡಿದ ದೊಡ್ಡ ತಪ್ಪಾಗಿತ್ತು. ಆದರೆ, ಅದಕ್ಕೂ ಮುಂಚಿನ ನಾಲ್ಕು ವರ್ಷಗಳ ಕಾಲ ಶುದ್ಧ ತಾಂತ್ರಿಕ ಕಚೇರಿಯಾಗಿದ್ದ ಪ್ರಧಾನ ಮಂತ್ರಿಗಳ ಕಾರ್ಯಾಲಯವು, ರಾಜಕೀಯಕ್ಕಿಳಿಯದೆ ಅವರಿಗೆ ಸಮರ್ಪಕ ಸಲಹೆಯನ್ನು ನೀಡುತ್ತಿತ್ತು” ಎಂದು 82 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅಭಿಪ್ರಾಯ ಪಟ್ಟಿದ್ದಾರೆ.

“ಪಿ.ವಿ.ನರಸಿಂಹ ರಾವ್ ಎಷ್ಟು ಕೋಮುವಾದಿಯಾಗಿದ್ದರು, ಹಿಂದೂ ಕೇಂದ್ರಿತವಾಗಿದ್ದರು ಎಂಬುದನ್ನು ನಾನು ಕಂಡುಕೊಂಡಿದ್ದೆ” ಎಂದು ತಮ್ಮ ಕೃತಿಯ ಬಿಡುಗಡೆಯ ಸಮಾರಂಭದಲ್ಲಿ ಅವರು ಹೇಳಿದ್ದಾರೆ.

ಆ ಮಾತಿಗೆ ಪೂರಕವಾಗಿ ತಾನು ‘ರಾಮ್-ರಹೀಂ’ ಯಾತ್ರೆಯನ್ನು ನಡೆಸುವಾಗ ಪಿ.ವಿ.ನರಸಿಂಹ ರಾವ್ ಅವರೊಂದಿಗೆ ನಡೆಸಿದ್ದ ಮಾತುಕತೆಯನ್ನು ಮಣಿಶಂಕರ್ ಅಯ್ಯರ್ ಸವಿವರವಾಗಿ ಬಹಿರಂಗಗೊಳಿಸಿದ್ದಾರೆ.

“ನನ್ನ ಯಾತ್ರೆಗೆ ಯಾವುದೇ ಆಕ್ಷೇಪವಿಲ್ಲವೆಂದು ನರಸಿಂಹ ರಾವ್ ಹೇಳಿದರು. ಆದರೆ, ಜಾತ್ಯತೀತತೆ ಕುರಿತ ನನ್ನ ವ್ಯಾಖ್ಯಾನಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು. ಆಗ ನಾನು ನನ್ನ ಜಾತ್ಯತೀತತೆ ಕುರಿತ ವ್ಯಾಖ್ಯಾನದಲ್ಲಿ ಯಾವ ತಪ್ಪಿದೆ ಎಂದು ಪ್ರಶ್ನಿಸಿದೆ. ಅದಕ್ಕವರು, “ಮಣಿ, ಇದು ಹಿಂದೂ ರಾಷ್ಟ್ರ ಎಂಬುದು ನಿಮಗೆ ಅರ್ಥವಾದಂತಿಲ್ಲ” ಎಂದರು. ಆಗ ನನ್ನ ಕುರ್ಚಿಯಲ್ಲಿ ಕುಳಿತಿದ್ದ ನಾನು, “ಬಿಜೆಪಿ ಹೇಳುತ್ತಿರುವುದೂ ಕೂಡಾ ಇದನ್ನೇ” ಎಂದು ಹೇಳಿದೆ” ಎಂದು ಮಣಿಶಂಕರ್ ಅಯ್ಯರ್ ಸ್ಮರಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ “ಬಿಜೆಪಿಯ ಪ್ರಥಮ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯಲ್ಲ; ಬದಲಿಗೆ ಪಿ.ವಿ. ನರಸಿಂಹ ರಾವ್” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪಿ.ವಿ.ನರಸಿಂಹ ರಾವ್ ಅವರು 1991ರಿಂದ 1996ರವರೆಗೆ ಭಾರತದ ಒಂಬತ್ತನೆ ಪ್ರಧಾನ ಮಂತ್ರಿಯಾಗಿದ್ದರು ಹಾಗೂ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದರು. ಪಿ.ವಿ.ನರಸಿಂಹ ರಾವ್ ಅವರ ಅವಧಿಯಲ್ಲೇ ಬಾಬ್ರಿ ಮಸೀದಿ ಧ್ವಂಸಗೊಂಡು, ದೇಶಾದ್ಯಂತ ಕೋಮು ಹಿಂಸಾಚಾರ ಸ್ಫೋಟಗೊಂಡಿತ್ತು.

ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News