ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಗಾಂಧಿ, ವಾಜಪೇಯಿ ಸ್ಮಾರಕಗಳಿಗೆ ಮೋದಿ ನಮನ

Update: 2024-06-09 05:39 GMT

Photo: X/@narendramodi

ಹೊಸದಿಲ್ಲಿ: ಇಂದು ದಾಖಲೆಯ ಮೂರನೆಯ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ರಾಜ್ ಘಾಟ್ ಗೆ ತೆರಳಿದ ಅವರು ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿ, ನಂತರ ದಿಲ್ಲಿಯಲ್ಲಿನ ಸದೈವ ಅಟಲ್ ಸ್ಮಾರಕಕ್ಕೆ ಭೇಟಿ ನೀಡಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಮಿಸಿದರು. ತದನಂತರ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಪುಷ್ಪಗುಚ್ಛವಿರಿಸಿ, ಗೌರವ ಸಲ್ಲಿಸಿದರು. ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಪ್ರಧಾನಿಯೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಇದ್ದದ್ದು ಕಂಡು ಬಂದಿತು.

ಇಂದು ಸಂಜೆ 7.15 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ತಮ್ಮ 30 ಮಂದಿ ಸಂಪುಟ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಎಲ್ಲರಿಗೂ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ್ ಸಿಂಘೆ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾಗವಹಿಸಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ದೊರೆತಿದ್ದು, ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಬೇಕೊ ಬೇಡವೊ ಎಂಬ ಕುರಿತು ಅವರು ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News