ಬಜರಂಗ್ ಪುನಿಯಾರನ್ನು ಅಮಾನತುಗೊಳಿಸಿದ ರಾಷ್ಟ್ರೀಯ ಉದ್ದೀಪನ ದ್ರವ್ಯ ನಿಗ್ರಹ ದಳ: ವರದಿ

Update: 2024-05-05 08:09 GMT

 ಬಜರಂಗ್ ಪುನಿಯಾ | PC : PTI 

ಹೊಸ ದಿಲ್ಲಿ: ಕುಸ್ತಿಪಟು ಬಜರಂಗ್ ಪುನಿಯಾರನ್ನು ಅನಿರ್ದಿಷ್ಟಾವಧಿ ಕಾಲದವರೆಗೆ ರಾಷ್ಟ್ರೀಯ ಉದ್ದೀಪನ ದ್ರವ್ಯ ನಿಗ್ರಹ ದಳ (ನಾಡಾ) ಅಮಾನತುಗೊಳಿಸಿದ್ದು, ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಬಜರಂಗ್ ಪುನಿಯಾರಿಗೆ ಭಾರಿ ಹಿನ್ನಡೆಯುಂಟಾಗಿದೆ. ಮೂಲಗಳ ಪ್ರಕಾರ, ಮಾರ್ಚ್ 10ರಂದು ಸೋನಿಪತ್ ನಲ್ಲಿ ನಡೆದಿದ್ದ ಪ್ರಾಯೋಗಿಕ ಆಯ್ಕೆಯ ಹಂತದಲ್ಲಿ ಪುನಿಯಾ ತಮ್ಮ ಮೂತ್ರದ ಮಾದರಿಯನ್ನು ಒದಗಿಸಲು ವಿಫಲಗೊಂಡಿದ್ದರಿಂದ, ಭವಿಷ್ಯದ ಪಂದ್ಯಾವಳಿಗಳಲ್ಲಿ ಭಾಗವಹಿಸದಂತೆ ಅವರ ವಿರುದ್ಧ ನಾಡಾ ಅಮಾನತು ಆದೇಶವನ್ನು ಜಾರಿಗೊಳಿಸಿದೆ ಎಂದು ಹೇಳಲಾಗಿದೆ.

ಎಪ್ರಿಲ್ 23ರಂದು ನಾಡಾ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, “ಈ ವಿಷಯದ ವಿಚಾರಣೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ, ಈ ಆದೇಶದ ಕಂಡಿಕೆ 4:1:2 ಹಾಗೂ ಎನ್ಎಡಿಆರ್ 2021ರ ವಿಧಿ 7.4ರ ಅನ್ವಯ ಬಜರಂಗ್ ಪುನಿಯಾರನ್ನು ತಕ್ಷಣದಿಂದಲೇ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸದಂತೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ” ಎಂದು ಹೇಳಲಾಗಿದೆ.

ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಒಲಿಂಪಿಕ್ ಕ್ರೀಡಾಪಟುಗಳಾದ ಸಾಕ್ಷಿ ಮಲಿಕ್ ಹಾಗೂ ವಿನೇಶ್ ಪೋಗಟ್ ರೊಂದಿಗೆ ಬಜರಂಗ್ ಪುನಿಯಾ ಮುಂಚೂಣಿಯಲ್ಲಿದ್ದರು.

ಉದ್ದೀಪನ ದ್ರವ್ಯ ಪರೀಕ್ಷೆಯಲ್ಲಿ ವಿಫಲಗೊಂಡ ಆರೋಪ ಎದುರಿಸುತ್ತಿರುವುದರಿಂದ ಟೋಕಿಯೊ ಒಲಿಂಪಿಕ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಬಜರಂಗ್ ಪುನಿಯಾ, ಈ ಮಾಸಾಂತ್ಯದಲ್ಲಿ ನಡೆಯಲಿರುವ ಪ್ರಾಯೋಗಿಕ ಆಯ್ಕೆ ಪರೀಕ್ಷೆಯಿಂದ ನಿರ್ಬಂಧಕ್ಕೊಳಗಾಗುವ ಸಾಧ್ಯತೆ ಇದೆ. ಇದುವರೆಗೂ 65 ಕೆಜಿ ಕುಸ್ತಿ ವಿಭಾಗದಲ್ಲಿ ಯಾವೊಬ್ಬ ಭಾರತೀಯ ಕ್ರೀಡಾಪಟುವೂ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News