ಛತ್ತೀಸ್ ಗಢ ಚುನಾವಣೆಗೆ ನಕ್ಸಲರ ಹಿಂಸಾ ಮುನ್ನುಡಿ: 2 ಕಡೆ ಸ್ಫೋಟ
ರಾಯಪುರ: ಛತ್ತೀಸ್ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಮಂಗಳವಾರ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸೋಮವಾರ ಬಸ್ತರ್ನ ಕನ್ಕೇರ್ ಮತ್ತು ನಾರಾಯಣಪುರ ಜಿಲ್ಲೆಗಳಲ್ಲಿ ಎರಡು ಐಇಡಿ ಸ್ಫೋಟಗಳು ಸಂಭವಿಸಿವೆ. ಈ ನಕ್ಸಲ್ ಕೃತ್ಯದಲ್ಲಿ ಇಬ್ಬರು ಚುನಾವಣಾ ಸಿಬ್ಬಂದಿ ಮತ್ತು ಅರೆಮಿಲಿಟರಿ ಪಡೆಯ ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಮಾವೋವಾದಿಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಚುನಾವಣೆಗೆ ಮುನ್ನ ಕಳೆದ 15 ದಿನಗಳಲ್ಲಿ ಇಬ್ಬರು ಬಿಜೆಪಿ ಮುಖಂಡರು ಸೇರಿದಂತೆ ಐದು ಮಂದಿ ನಕ್ಸಲ್ ಕೃತ್ಯದಿಂದ ಹತ್ಯೆಗೀಡಾಗಿದ್ದಾರೆ.
ಮೊದಲ ಹಂತದಲ್ಲಿ 20 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಪೈಕಿ 12 ನಕ್ಸಲ್ಪೀಡಿತ ಬಸ್ತರ್ ವಿಭಾಗದಲ್ಲಿವೆ. 60 ಸಾವಿರ ಭದ್ರತಾ ಸಿಬ್ಬಂದಿಯನ್ನು ಬಸ್ತರ್ನಲ್ಲೇ ನಿಯೋಜಿಸಲಾಗಿದ್ದು, 40 ಸಾವಿರ ಮಂದಿ ಕೇಂದ್ರೀಯ ಪಡೆಗಳ ಯೋಧರು ಸೇರಿದಂತೆ 20 ಕ್ಷೇತ್ರಗಳಲ್ಲಿ ಒಂದು ಲಕ್ಷ ಭದ್ರತಾ ಸಿಬ್ಬಂದಿ ನಿಯೋಜಿತರಾಗಿದ್ದಾರೆ. ಪ್ರತಿ 100 ಮತದಾರರಿಗೆ ಒಬ್ಬರಂತೆ ಪೊಲೀಸರು ಇದ್ದಾರೆ. ಶಾಂತಿಯುತ ಮತದಾನದ ಉದ್ದೇಶದಿಂದ ಡ್ರೋಣ್ ಮತ್ತು ಹೆಲಿಕಾಪ್ಟರ್ಗಳನ್ನೂ ಭದ್ರತಾ ಕಣ್ಗಾವಲಿಗೆ ನಿಯೋಜಿಸಲಾಗಿದೆ.
ಬಸ್ತರ್ ಪ್ರದೇಶದಲ್ಲಿ 20.4 ಲಕ್ಷ ಮತದಾರರಿದ್ದು, ಈ ಪೈಕಿ ಶೇಕಡ 51ರಷ್ಟು ಮಹಿಳೆಯರು. 35 ಬೂತ್ಗಳಿಗೆ ಮಹಿಳಾ ಕಮಾಂಡೊಗಳು ಕಾವಲು ಕಾಯುತ್ತಿದ್ದಾರೆ. ನಕ್ಸಲ್ಪೀಡಿತ 10 ಕ್ಷೇತ್ರಗಳಲ್ಲಿ ಮತದಾನ ಮುಂಜಾನೆ 7ಕ್ಕೆ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆವರೆಗೆ ನಡೆಯಲಿದೆ. ಉಳಿದ 10 ಕಡೆ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಮತದಾನ ನಡೆಯುತ್ತದೆ.