ಕುಡಿದು ಕಾರು ಚಲಾಯಿಸಿದ ಎನ್ ಸಿಪಿ ಮುಖಂಡನ ಪುತ್ರ: ಕೋಳಿ ಸಾಗಾಟದ ವಾಹನಕ್ಕೆ ಢಿಕ್ಕಿ, ಪ್ರಕರಣ ದಾಖಲು
ಮುಂಬೈ: ಶರದ್ ಪವಾರ್ ನೇತೃತ್ವದ ಎನ್ ಸಿಪಿ ಮುಖಂಡ ಬಂಡು ಅಲಿಯಾಸ್ ತಾತ್ಯ ಗಾಯಕ್ವಾಡ್ ಪುತ್ರ ಹಾಗೂ ಮಾಜಿ ಕಾರ್ಪೊರೇಟರ್ ಸೌರಭ್ ಗಾಯಕ್ವಾಡ್, ಮದ್ಯದ ಅಮಲಿನಲ್ಲಿ ಕೋಳಿ ಸಾಗಾಣಿಕೆ ಟೆಂಪೋ (ಎಸ್ ಯುವಿ) ಗೆ ಢಿಕ್ಕಿ ಹೊಡೆದ ಪ್ರಕರಣ ಕೇಶವನಗರ ಎಂಬಲ್ಲಿ ಬುಧವಾರ ಸಂಭವಿಸಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಸೌರಭ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಅಪಘಾತದಲ್ಲಿ ಟೆಂಪೋ ಚಾಲಕ ಮತ್ತು ಕ್ಲೀನರ್ ಗೆ ಗಾಯಗಳಾಗಿವೆ.
ಕೇಶವನಗರದ ಮಂಜ್ರಿ ಮುಂಡ್ವಾ ರಸ್ತೆಯಲ್ಲಿ ಈ ಅಪಘಾತ ನಡೆದಿದ್ದು, ಎದುರಿನಿಂದ ಬರುತ್ತಿದ್ದ ಕೋಳಿ ಸಾಗಾಟದ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ. ಸೌರಭ್ ಗಾಯಕ್ವಾಡ್ ರಾಂಗ್ ಸೈಡ್ ನಲ್ಲಿ ವಾಹನ ಚಲಾಯಿಸುತ್ತಿದ್ದ ಹಾಗೂ ಪಾನಮತ್ತ ಸ್ಥಿತಿಯಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತ ನಡೆದರೂ ಸೌರಭ್ ಗಾಯಕ್ವಾಡ್ ವಾಹನವನ್ನು ನಿಲ್ಲಿಸದೇ ತೆರಳಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ತೀವ್ರ ಗಾಯಗೊಂಡ ಟೆಂಪೊ ಚಾಲಕ ರಾಜಾ ಶೇಖ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರು ನೆರವಾದರು. ಅವರ ಆರೋಗ್ಯ ಸ್ಥಿತಿ ಇದೀಗ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಅಗಲ ಕಿರಿದಾದ ಸಿಂಗಲ್ ಲೇನ್ ರಸ್ತೆಯಲ್ಲಿ ವಾಹನವನ್ನು ಓಡಿಸುತ್ತಿದ್ದ ಎನ್ನಲಾಗಿದ್ದು, ಟೆಂಪೊಗೆ ಮುಖಾಮುಖಿ ಢಿಕ್ಕಿಯಾಗಿದೆ. ಇದರ ಪರಿಣಾಮವಾಗಿ ಟೆಂಪೊ ರಸ್ತೆ ಪಕ್ಕಕ್ಕೆ ಉರುಳಿದೆ. ಅಪಘಾತದ ರಭಸಕ್ಕೆ ವಾಹನದಲ್ಲಿದ್ದ ಕೋಳಿಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.